ADVERTISEMENT

ಟೊಯೊಟಾ ಕಾರ್ಮಿಕರ ಮುಷ್ಕರ: ಪ್ರಧಾನಿ, ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ

50ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:33 IST
Last Updated 28 ಡಿಸೆಂಬರ್ 2020, 19:33 IST
ಟೊಯೋಟಾ ಕಾರ್ಮಿಕರು ಪ್ರತಿಭಟನಾ ಸ್ಥಳದಲ್ಲಿ ರಕ್ತದಾನ ಮಾಡಿದರು
ಟೊಯೋಟಾ ಕಾರ್ಮಿಕರು ಪ್ರತಿಭಟನಾ ಸ್ಥಳದಲ್ಲಿ ರಕ್ತದಾನ ಮಾಡಿದರು   

ಬಿಡದಿ: ಆಡಳಿತ ಮಂಡಳಿ ವಿರುದ್ಧ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಾರ್ಮಿಕ ಸಂಘ ನಡೆಸುತ್ತಿರುವ 50ನೇ ದಿನದ ಮುಷ್ಕರ ಹಾಗೂ ಹೋರಾಟದ ಅಂಗವಾಗಿ ಸೋಮವಾರ ನೂರಾರು ಕಾರ್ಮಿಕರು ಪ್ರತಿಭಟನಾ ಸ್ಥಳದಲ್ಲಿ ರಕ್ತದಾನ ಮಾಡಿದರು. ಸಮಸ್ಯೆ ಬಗೆಹರಿಸಲು ಮತ್ತು ಆಡಳಿತ ಮಂಡಳಿ ಸರಿದಾರಿಗೆ ತರಲು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಕಾರ್ಮಿಕರು ರಕ್ತದಿಂದ ಪತ್ರ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೋತ್ಥಾನ ಪರಿಷತ್ ರಕ್ತ ನಿಧಿ ಬೆಂಗಳೂರು ಹಾಗೂ ಬೆಳ್ಳಿ ರಕ್ತನಿಧಿ ಸಹಯೋಗದೊಂದಿಗೆ ಬೃಹತ್ ರಕ್ತದಾನ ಮಾಡುವ ಮೂಲಕ ಕಾರ್ಮಿಕರು ತಮ್ಮ ಚಳವಳಿಗೆ ಹೊಸ ಆಯಾಮ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟೊಯೊಟಾ ಕಾರ್ಮಿಕರ ಸಂಘದ ಅಧ್ಯಕ್ಷ ಚೆಕ್ಕರೆ ಪ್ರಸನ್ನಕುಮಾರ್, ಕಳೆದ ಐವತ್ತು ದಿನಗಳಿಂದಲೂ ಹಗಲಿರುಳು ಆಡಳಿತ ಮಂಡಳಿ ಅನ್ಯಾಯ ಖಂಡಿಸಿ ಮುಷ್ಕರ ನಡೆಸಲಾಗುತ್ತಿದೆ. ಆಡಳಿತ ಮಂಡಳಿ ತನ್ನ ಜಿಗುಟುತನ ಬಿಡುತ್ತಿಲ್ಲ. ಸರ್ಕಾರ ಮಧ್ಯೆ ಪ್ರವೇಶಿಸಿ ನ್ಯಾಯ ಕೊಡಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿ ಅವೈಜ್ಞಾನಿಕ ಕೆಲಸದ ಒತ್ತಡ ಹಾಗೂ ಅಮಾನವೀಯ ನಡೆಯ ವಿರುದ್ಧ ಕಾರ್ಮಿಕ ಸಂಘದಿಂದ ವಿಧಾನಸೌಧ ಚಲೋ, ರಾಜಭವನ ಚಲೋ, ಛತ್ರಿ ಚಳುವಳಿ, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗೂ ಬೆಂಗಳೂರು - ಮೈಸೂರು ರಸ್ತೆಯಲ್ಲಿ ಬೃಹತ್ ಮಾನವ ಸರಪಳಿ ಸೇರಿದಂತೆ ಅನೇಕ ವಿಭಿನ್ನ ಹೋರಾಟ ಮಾಡಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.