ADVERTISEMENT

ವಿದ್ಯಾಗಮ: ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 20:35 IST
Last Updated 31 ಆಗಸ್ಟ್ 2020, 20:35 IST
ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್
ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್   

ಬೆಂಗಳೂರು: ‘ಶಿಕ್ಷಣ ವಲಯದಲ್ಲಿ ಕೋವಿಡ್‌ ಉಂಟು ಮಾಡಿರುವ ಅನಿಶ್ಚಿತತೆಯ ನಡುವೆಯೂ ರಾಜ್ಯದ ಶಾಲಾ ಮಕ್ಕಳಿಗೆ ‘ವಿದ್ಯಾಗಮ’ ಎಂಬ ನಿರಂತರ ಕಲಿಕಾ ಯೋಜನೆ ನಡೆಯುತ್ತಿದೆ’ ಎಂದುಕೇಂದ್ರದ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್‌ ಅವರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

‘ಕೋವಿಡ್‌ ಮಧ್ಯೆಯೂ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆ ಹಾಗೂ ಕಲಿಕೆಯಲ್ಲಿ ತಂತ್ರಜ್ಞಾನದ ಸದ್ಬಳಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ತಜ್ಞರ ಸಮಿತಿ ರಚಿಸಿದ್ದೆವು. ಈ ಸಮಿತಿ ನೀಡಿದ್ದ ವರದಿಯಂತೆ, ವಿವಿಧ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳ ಕಲಿಕೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ವಿದ್ಯಾಗಮ ಆರಂಭಿಸಿದ್ದೇವೆ. ಈ ಕಾರ್ಯಕ್ರಮದ ಮೂಲಕ ಶಿಕ್ಷಣವನ್ನು ಮಕ್ಕಳ ಮನೆ ಬಾಗಿಲಿಗೆ ಕೊಂಡೊಯ್ದಿದ್ದೇವೆ. ಇದೊಂದು ವೈಜ್ಞಾನಿಕ ವಿಧಾನವಾಗಿದ್ದು, ಬೇರೆಲ್ಲಿಯೂ ಅನುಸರಿಸಿಲ್ಲ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ವಿದ್ಯಾಗಮ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಭಾಗೀದಾರರ ಕಾರ್ಯ, ಶಿಕ್ಷಕರ ಜವಾಬ್ದಾರಿ ಮತ್ತು ಕಾರ್ಯಕ್ರಮದ ವಿವರನ್ನು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮದ ಅನುಷ್ಠಾನಾಧಿಕಾರಿಯ ಕಾರ್ಯದ ಬಗ್ಗೆಯೂ ಸ್ಪಷ್ಟ ಉಲ್ಲೇಖವಿದೆ. ಈ ಕಾರಣದಿಂದ ತಜ್ಞರ ವರದಿ, ವಿದ್ಯಾಗಮ ಕಾರ್ಯಕ್ರಮದ ರೂಪುರೇಷೆ ಹಾಗೂ ಅದರ ಅನುಷ್ಠಾನಕ್ಕೆ ಸಂಬಂಧಿಸಿದ ಸುತ್ತೋಲೆಗಳನ್ನು ಈ ಪತ್ರದೊಂದಿಗೆ ಕಳುಹಿಸಿ ಕೊಡಲಾಗಿದೆ’ ಎಂದೂ ಸಚಿವರು ಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.