ADVERTISEMENT

ಕನ್ನಡವೇ ನಿತ್ಯ ಚಿಮೂ ಜೀವನದ ಸತ್ಯ

ಆರ್.ಪೂರ್ಣಿಮಾ
Published 11 ಜನವರಿ 2020, 21:28 IST
Last Updated 11 ಜನವರಿ 2020, 21:28 IST
ಶನಿವಾರ ಬೆಳಿಗ್ಗೆ ನಿಧನರಾದ ಹಿರಿಯ ವಿದ್ವಾಂಸ ಚಿದಾನಂದಮೂರ್ತಿ ಅವರ ಪಾರ್ಥಿವ ಶರೀರದ ಮುಂದೆ ಮಗ ವಿನಯ್‌ ಕುಮಾರ್‌ (ಪಾಚಿ ಬಣ್ಣದ ಶರ್ಟ್ ಧರಿಸಿರುವವರು) ಅವರನ್ನು ಸಂತೈಸುತ್ತಿರುವ ಸಂಬಂಧಿಕರು
ಶನಿವಾರ ಬೆಳಿಗ್ಗೆ ನಿಧನರಾದ ಹಿರಿಯ ವಿದ್ವಾಂಸ ಚಿದಾನಂದಮೂರ್ತಿ ಅವರ ಪಾರ್ಥಿವ ಶರೀರದ ಮುಂದೆ ಮಗ ವಿನಯ್‌ ಕುಮಾರ್‌ (ಪಾಚಿ ಬಣ್ಣದ ಶರ್ಟ್ ಧರಿಸಿರುವವರು) ಅವರನ್ನು ಸಂತೈಸುತ್ತಿರುವ ಸಂಬಂಧಿಕರು   
""

ಅಧ್ಯಯನ, ಅಧ್ಯಾಪನ, ಸಂಶೋಧನೆ, ಬರವಣಿಗೆ, ಪ್ರತಿಭಟನೆ, ಹೋರಾಟ, ಚಳವಳಿ, ಹಕ್ಕೊತ್ತಾಯ ಏನಾದರೂ ಇರಲಿ, ಎಲ್ಲವನ್ನೂ ಕನ್ನಡವೆಂಬ ದಿವ್ಯಮಂತ್ರದಿಂದ ಆರಾಧಿಸಿದವರು ಡಾ.ಎಂ. ಚಿದಾನಂದಮೂರ್ತಿ. ಅವರ ನಾಡುನುಡಿಸೇವೆಯ ನೆಲೆಗಳು ಒಂದೆರಡಲ್ಲ ಹತ್ತಾರು. ಬಹುಭಾಷೆಯ ದೇಶದಲ್ಲಿ ಪ್ರತಿಯೊಂದು ಭಾಷೆಗೂ ಇರುವ ಅಸ್ಮಿತೆಯನ್ನು ಕಾಪಾಡಲು ತಮ್ಮಂಥ ಕಾಲಾಳುಗಳು ಅಗತ್ಯ ಎಂಬುದಷ್ಟೆ ಅವರ ಸರಳ ಭಾವನೆ. ಆದರೆ ಕರ್ನಾಟಕದ ಪಾಲಿಗೆ ಅವರು ಅಷ್ಟು ಮಾತ್ರ ಅಲ್ಲ, ಕನ್ನಡ ನಾಡು-ಕನ್ನಡ ಭಾಷೆಗೆ ಯಾವ ರೂಪದಲ್ಲಿ ಆಪತ್ತು ಒದಗಿದರೂ ಮುಂಚೂಣಿಯಲ್ಲಿ ನಿಂತು ಗರ್ಜಿಸುತ್ತಿದ್ದ ಅವರೊಬ್ಬ ವಾಮನರೂಪಿ ತ್ರಿವಿಕ್ರಮ.

ಹಿರೇಕೋಗಲೂರಿನಿಂದ ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ವಾಂಸರ ನೆರಳಿಗೆ ಬಂದು ನಿಲ್ಲಲು ಚಿದಾನಂದಮೂರ್ತಿ ಅವರಿಗೆ ಕನ್ನಡವೇ ಮುಖ್ಯ ಆಕರ್ಷಣೆ. ಮುಂದೆ ಅನೇಕರಂತೆ ಅವರು ಕನ್ನಡ ಸಾಹಿತ್ಯ ವನ್ನು ಬರೀ ಸಾಹಿತ್ಯವಾಗಿ ಓದಲಿಲ್ಲ; ಕನ್ನಡ ನಾಡಿನ ಇತಿಹಾಸ ಮತ್ತು ಪರಂಪರೆಯನ್ನು ಕಟ್ಟುವ ಒಂದು ಮುಖ್ಯ ಆಕರವಾಗಿ ಕನ್ನಡ ಸಾಹಿತ್ಯವನ್ನು ಪರಿಗಣಿಸಿದರು. ಕವಿರಾಜಮಾರ್ಗ, ಶೂನ್ಯಸಂಪಾದನೆ, ವಚನಸಾಹಿತ್ಯ- ಎಲ್ಲದರ ಸಂಶೋಧನೆಯಲ್ಲಿ ನಿರತ ರಾದರು. ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಅವರ ಪಿಎಚ್.ಡಿ. ಸಂಪ್ರಬಂಧ ಕರ್ನಾಟಕದ ಸಾಮಾಜಿಕ ಇತಿಹಾಸವನ್ನೂ ಒಂದು ರೀತಿಯಲ್ಲಿ ಕಟ್ಟಿಕೊಟ್ಟಿತು. ‘ಮಧ್ಯಕಾಲೀನ ಸಾಹಿತ್ಯ ದಲ್ಲಿ ಅಸ್ಪೃಶ್ಯತೆ’ ಮುಂತಾದ ಕೃತಿಗಳಲ್ಲಿ ಅದು ಮುಂದುವರೆಯಿತು. ‘ಭಾಷಾ ವಿಜ್ಞಾನದ ಮೂಲತತ್ವಗಳು’ ಬರೆದ ಚಿದಾನಂದಮೂರ್ತಿ ಭಾಷಾವಿಜ್ಞಾನದಲ್ಲಿ ಆಸಕ್ತರಾದರೂ ಭಾಷಾಚರಿತ್ರೆ, ಸಾಹಿತ್ಯಚರಿತ್ರೆಯೇ ಅವರ ಮನಸ್ಸನ್ನು ಹೆಚ್ಚು ಆವರಿಸಿದ್ದವು ಎಂದು ಹೇಳಬಹುದು.

ಡಾ.ಚಿದಾನಂದಮೂರ್ತಿಯವರ ಮೂರು ದಶಕಗಳ ಈ ಪಯಣಕ್ಕೆ ಹೊರಳುದಾರಿ ಸಿಕ್ಕಿದ್ದು ಬಹುಶಃ 1988ರಲ್ಲಿ. ಕನ್ನಡವೆಂದರೆ ಬರೀ ಸಾಹಿತ್ಯ ಮತ್ತು ಸಂಶೋಧನೆ ಅಲ್ಲ ಎಂದ ಅವರು ತಮ್ಮ ಕನ್ನಡಪ್ರೇಮವನ್ನು ಮತ್ತೊಂದು ಬಗೆಯಲ್ಲಿ ಅಕ್ಷರಶಃ ಬೀದಿಗಿಳಿದು ಘೋಷಿಸಿಕೊಂಡರು. ‘ಕನ್ನಡ ಶಕ್ತಿ ಕೇಂದ್ರ’ದ ಆರಂಭದ ಮೂಲಕ ಕನ್ನಡ ಚಳವಳಿಯ ಆದ್ಯತೆ, ಬಾಧ್ಯತೆಗಳನ್ನು ಬರೀ ಕನ್ನಡ ಬೋರ್ಡುಗಳಿಗಿಂತ ಮೇಲಕ್ಕೇರಿಸಿ ಬೇರೊಂದು ಶಕ್ತಿ ತುಂಬಿದರು. ಜ್ಞಾನಭಾರತಿಯ ಕನ್ನಡ ಅಧ್ಯಯನ ಕೇಂದ್ರದ ಮೂಲೆಯಲ್ಲಿದ್ದ ವಿಶಾಲ ಕೋಣೆಯಲ್ಲಿ ದೊಡ್ಡ ಮೇಜಿನ ತುಂಬಾ ಹರಡಿಕೊಂಡಿದ್ದ ಪುಸ್ತಕಗಳ ನಡುವೆ ತಲೆ ಬಗ್ಗಿಸಿ ಸದಾ ಓದುಬರಹ
ದಲ್ಲಿ ನಿರತರಾಗಿರುತ್ತಿದ್ದ ಘನವಿದ್ವಾಂಸ ಚಿದಾನಂದಮೂರ್ತಿ, ಕನ್ನಡ ಹೋರಾ ಟಗಾರರಾಗಿ ಬದಲಾಗಿ ಕನ್ನಡ ತಲೆ ಎತ್ತಿ ನಿಲ್ಲುವಂತೆ ಮಾಡಲು ಶ್ರಮಿಸಿದ್ದು ಕನ್ನಡ ಸಂಸ್ಕೃತಿಯ ಪಾಲಿನ ಒಂದು ಸಂತೋಷಕರ ವಿಸ್ಮಯವೇ ಸರಿ!

ADVERTISEMENT

ಚಿದಾನಂದಮೂರ್ತಿ ಅವರು ತಮ್ಮ ಭಾಷಾಸಾಹಿತ್ಯ ಸಂಶೋಧನೆಯಲ್ಲಿ ಅತ್ಯಂತ ಸ್ಪಷ್ಟ, ನಿಖರ ಆಕರಗಳನ್ನೇ ಹುಡುಕುತ್ತಿದ್ದರು ಮತ್ತು ಪ್ರತಿಪಾದಿಸುತ್ತಿದ್ದರು. ಆದರೆ ತಮ್ಮ ಸಾಮಾಜಿಕ ಚಿಂತನೆಗೆ ಮತ್ತು ಇತಿಹಾಸದ ವ್ಯಾಖ್ಯಾನಕ್ಕೆ ಅವರು ಹಲವು ಆಕರಕ್ಕಿಂತ ಒಂದು ವಿಚಾರದ ನೆಲೆಯನ್ನು ಆರಿಸಿ ಕೊಂಡರು. ಆದ್ದರಿಂದಲೇ ಭಾಷೆಯ ಅಸ್ಮಿತೆಯ ಜೊತೆಗೆ ಧರ್ಮದ ಅಸ್ಮಿತೆಯ ಅಗತ್ಯವನ್ನೂ ಪ್ರಬಲವಾಗಿ ಮುಂದಿಟ್ಟರು. ತಮ್ಮ ಗುರುವಿನ ಈ ಗುರಿಯನ್ನು ಅವರ ಅನೇಕ ಶಿಷ್ಯರೇ ಒಪ್ಪಲು ಸಾಧ್ಯವಿರಲಿಲ್ಲ. ಕನ್ನಡನಾಡು ಮತ್ತು ಭಾರತದೇಶ ಕುರಿತು ಆಳವಾದ ಅಧ್ಯಯನ ಮಾಡಿರುವ ಚಿದಾನಂದ ಮೂರ್ತಿ ಅವರಿಗೆ, ಇತಿಹಾಸದಲ್ಲಿ ಹಾಸುಹೊಕ್ಕಾಗಿರುವ ಬಹುಮುಖಿ, ಬಹುರೂಪಿ ಎಳೆಗಳು ಕಣ್ಣಿಗೆ ಬೀಳಲಿ ಲ್ಲವೇ ಎಂಬುದು ಚಿದಂಬರ ರಹಸ್ಯ. ಅವರು ಮುಂದಿಟ್ಟ ಸಾಮಾಜಿಕ ಸಂಕಥನಕ್ಕೆ ಒಂದೇ ರಾಗ, ಒಂದೇ ತಾಳ ಎಂಬ ಅಪಸ್ವರವೂ ಇಲ್ಲದಿಲ್ಲ.

ಡಾ. ಚಿದಾನಂದಮೂರ್ತಿ ಅವರ ವ್ಯಕ್ತಿತ್ವದ ಮತ್ತು ಸಾಮಾಜಿಕ ಜೀವನದ ನೈರ್ಮಲ್ಯ, ಅವರ ಅಪರಿಮಿತ ಶಿಷ್ಯವಾತ್ಸಲ್ಯ, ನೊಂದವರಿಗೆ ನೆರವಾಗುವ ಔದಾರ್ಯ, ಹಿರಿಯರು ಕಿರಿಯರು ಎನ್ನದೆ ಎಲ್ಲರ ಬಗ್ಗೆ ತೋರುವ ಆದರ, ಇನ್ನೂ ಮುಂತಾದ ಅನೇಕ ಗುಣಗಳು ಸಾರ್ವಜನಿಕ ಜೀವನದಲ್ಲಿ ಒಂದು ‘ಮಾನವೀಯ ಮಾದರಿ’ಯಾಗಿ ನಿಲ್ಲುವುದಂತೂ ಖಂಡಿತ.

ಎಚ್‌.ಎಲ್. ನಾಗೇಗೌಡರೊಂದಿಗೆ

ಕನ್ನಡ ಅಜೆಂಡಾ
ಚಿದಾನಂದಮೂರ್ತಿ ಅವರ ಹೋರಾಟಕ್ಕೆ ಕನ್ನಡದ ಏಳಿಗೆ ಬಿಟ್ಟರೆ ಬೇರೆ ಅಜೆಂಡಾ ಇರಲಿಲ್ಲ. ಅವರ ಹೋರಾಟದ ಮುಖ್ಯಗುಣಗಳೆಂದರೆ ಸತ್ಯಾಗ್ರಹ, ಹಕ್ಕೊತ್ತಾಯ ಮತ್ತು ಭ್ರಷ್ಟತೆಯ ಸೋಂಕಿಲ್ಲದ ಸದಾಚಾರ. ಸಂಶೋಧನೆಯ ಮಾರ್ಗದಲ್ಲಿ ಅವರೊಡನೆ ನಡೆದ ಶಿಷ್ಯರು ನೂರಾರು; ಈಗ ಚಳವಳಿಯ ಮಾರ್ಗದಲ್ಲಿ ಅವರೊಡನೆ ನಡೆದವರು ಸಾವಿರಾರು. ವಿಶ್ವ ವಿದ್ಯಾಲಯದಲ್ಲಿ ‘ಎಂಸಿಎಂ’ ಎಂದೇ ಖ್ಯಾತರಾಗಿದ್ದ ಅವರು ಕನ್ನಡದ ‘ಚಿಮೂ’ ಆಗಿ ಬದಲಾದರು. ದಗಲಬಾಜಿ, ವಸೂಲಿಬಾಜಿಗಳನ್ನು ದೂರವಿಟ್ಟಿದ್ದ ಅವರನ್ನು ಕನ್ನಡ ಚಳವಳಿಯೇ ದೂರವಿಟ್ಟಿತೋ ಎಂದು ಅನುಮಾನಿಸುವಂತೆ, ಕ್ರಮೇಣ ಅವರು ಕನ್ನಡಕ್ಕೆ ‘ಶಾಸ್ತ್ರೀಯ ಸ್ಥಾನಮಾನ’ದಂಥ ವಿಷಯಗಳಿಗೆ ಗಮನ ಹರಿಸಿ ವಿದ್ವತ್‌ಪೂರ್ಣವಾಗಿ ದುಡಿದರು.

ಚಿದಾನಂದಮೂರ್ತಿ ಅವರು 75ಕ್ಕೂ ಹೆಚ್ಚು ಕೃತಿಗಳು, 400ಕ್ಕೂ ಅಧಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ನಾಟಕದ ಇತಿಹಾಸ –ಸಂಸ್ಕೃತಿ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದ್ದಾರೆ.

‘ವಾಗರ್ಥ’, ‘ಸಂಶೋಧನಾ ತರಂಗ’ದ ಎರಡು ಸಂಪುಟಗಳು, ‘ಲಿಂಗಾಯತ ಅಧ್ಯಯನ ಗಳು’, ‘ಹೊಸತು ಹೊಸತು’, ‘ಶೂನ್ಯ ಸಂಪಾದನೆಯನ್ನು ಕುರಿತು’. ‘ವಚನ ಸಾಹಿತ್ಯ’, ‘ವಚನ ಶೋಧ-1’, ವಚನ ಶೋಧ-2 – ಇವು ಕೆಲವು ಕೃತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.