ADVERTISEMENT

ಕೊರೊನಾ ಜೊತೆ ಬದುಕೋಣ: ‘ಲೇ... ಮಾಸ್ಕ್‌ ಹಾಕೊ ತಮ್ಮಾ...’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 19:02 IST
Last Updated 15 ಸೆಪ್ಟೆಂಬರ್ 2020, 19:02 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ನೀವೆಲ್ಲ ಎಚ್ಚರಿಕೆಯಾಗಿ ಇರ‍್ರಯ್ಯಾ ...ಮಾಸ್ಕ್‌ ಹಾಕೊ ತಮ್ಮಾ... ಲೇ.. ಮಾಸ್ಕ್‌ ಹಾಕೊ...’

‘ಇದನ್ನು ನಿರ್ಲಕ್ಷ್ಯ ಮಾಡೋಕೆ ಹೋಗಬೇಡಿ. ನೋಡೋಕೆ ಇದು ತುಂಬ ಸಿಂಪಲ್‌. ನಿಮಗೆ ಆಸ್ಪತ್ರೆಗೆ ಹೋದರೆ ಗೊತ್ತಾಗುತ್ತೆ ಕಥೆ. ನಿಮ್ಮನ್ನು ಯಾರೂ, ನಿಮ್ಮ ಮನೆಯವರೂ ಬಂದು ನೋಡುವಂಗಿಲ್ಲ. ನಿಮಗೆ ಯಾರೂ ಬಂದು ಊಟ ಕೊಡುವವರಿಲ್ಲ. ಕಷ್ಟ ಸುಖ ವಿಚಾರಿಸುವವರಿಲ್ಲ. ಬರದೇ ಇರಲಿ ಪಾಪ... ಯಾರಿಗೂ ಬರಬಾರದು’

– ಕೋವಿಡ್ ದೃಢಪಟ್ಟು 10 ದಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ, 15 ದಿನ ಹೋಮ್ ಕ್ವಾರಂಟೈನ್ ಮುಗಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಸ್ಕ್‌ ಧರಿಸದೆ ತಮ್ಮ ಬಳಿಗೆ ಬಂದವರನ್ನು ಕಂಡು, ಕೊರೊನಾ ಸೋಂಕಿನ ಬಗ್ಗೆ ನೀಡಿದ ಎಚ್ಚರಿಕೆಯಿದು.

ADVERTISEMENT

‘ನಾನೂ ಕೂಡಾ ಕೊರೊನಾ ಸೋಂಕು ತಗಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗ ಗುಣಮುಖನಾಗಿದ್ದೇನೆ. ನನಗೆ ಶುಭ ಕೋರಿದ ಎಲ್ಲ ರಾಜಕಾರಣಿಗಳಿಗೆ, ಸ್ನೇಹಿತರಿಗೆ, ಬಂಧುಗಳಿಗೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ.

ಕೋವಿಡ್‌ ಸಾಂಕ್ರಾಮಿಕ ರೋಗ, ವೇಗವಾಗಿ ಹರಡುವಂಥದ್ದು. ಕೆಲವರಿಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇನ್ನೂ ಕೆಲವರಿಗೆ ರೋಗದ ಲಕ್ಷಣಗಳು ಕಾಣಿಸುವುದೇ ಇಲ್ಲ. ನನಗೆ ಆ. 2ರಂದು ಮತ್ತು 3ರಂದು ಸಣ್ಣಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, ನಾನು ಮಣಿಪಾಲ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿತ್ತು. ಅಲ್ಲಿ ದಾಖಲಾಗಿ 10 ದಿನ ಚಿಕಿತ್ಸೆ ಪಡೆದೆ. ಬಳಿಕ ವೈದ್ಯರ ಸಲಹೆಯಂತೆ 15 ದಿನ ಹೋಮ್‌ ಕ್ವಾರಂಟೈನ್‌ನಲ್ಲಿದ್ದೆ. ಎಲ್ಲೂ ಹೊರಗಡೆ ಬಂದಿರಲಿಲ್ಲ. ಆ ಅವಧಿಯಲ್ಲಿ ಯಾರನ್ನೂ ಭೇಟಿ ಮಾಡಲಿಲ್ಲ. ನಿಮಗೆ ಯಾರಿಗಾದ್ರೂ ಬಂದರೆ ಹೀಗೆ ಎಚ್ಚರವಹಿಸಿ. .

ಕೋವಿಡ್‌ ವಾಸಿ ಆಗದ ರೋಗವೇನೂ ಅಲ್ಲ. 100ಕ್ಕೆ 98ರಷ್ಟು ಜನ ಗುಣಮುಖರಾಗುತ್ತಾರೆ. ಬೇರೆ ಬೇರೆ ಕಾಯಿಲೆಗಳು ಇದ್ದರೆ ಸ್ವಲ್ಪ ತೊಂದರೆ ಆಗುತ್ತದೆ. ಕಿಡ್ನಿ, ಹೃದಯ ಸಂಬಂಧಿ ಸಮಸ್ಯೆ, ಡಯಾಬಿಟಿಕ್‌ ಈ ಥರ ಇದ್ದವರಿಗೆ ಸಮಸ್ಯೆ ಆಗಬಹುದು. ಸಮಸ್ಯೆಗಳಿದ್ದವರಿಗೂ ರೋಗ ವಾಸಿಯಾಗಿದೆ.

ನನಗೂ ಡಯಾಬಿಟಿಕ್‌ ಇದೆ. ಆ್ಯಂಜಿಯೋಪ್ಲಾಸ್ಟಿ ಆಗಿದೆ. ಗುಣಮುಖನಾಗಿದ್ದೇನೆ. ಆರಾಮವಾಗಿದ್ದೇನೆ. ಮತ್ತೆ ಎಂದಿನಂತೆ ಕಾರ್ಯಪ್ರವೃತ್ತನಾಗಿದ್ದೇನೆ. ಹೀಗಾಗಿ, ಯಾರೂ ರೋಗದ ಬಗ್ಗೆ ಭಯ ಪಡಬೇಕಿಲ್ಲ. ಆದರೆ, ನಿರ್ಲಕ್ಷ್ಯ ಮಾಡಬಾರದು. ಸೋಂಕು ತಗಲಿತೆಂದು ಆತಂಕಪಡುವುದೂ ಬೇಕಿಲ್ಲ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.