ADVERTISEMENT

ಲಿಂಗಾಯತ ಸಮುದಾಯ ರಾಜಕೀಯಕ್ಕೆ ಬಳಕೆ: ಜಯಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 17:02 IST
Last Updated 28 ಜನವರಿ 2021, 17:02 IST
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಸಾಗುತ್ತಿರುವ ಪಂಚಲಕ್ಷ ಪಾದಯಾತ್ರೆಯು ಗುರುವಾರ ಹರಿಹರಕ್ಕೆ ಆಗಮಿಸಿತು
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಸಾಗುತ್ತಿರುವ ಪಂಚಲಕ್ಷ ಪಾದಯಾತ್ರೆಯು ಗುರುವಾರ ಹರಿಹರಕ್ಕೆ ಆಗಮಿಸಿತು   

ಹರಿಹರ: ‘ಬಿ.ಎಸ್‌. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಮೂಲಕ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿ ಕಲ್ಪಿಸದಿದ್ದರೆ ಮುಂಬರುವ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ಕೂಡಲಸಂಗಮದಿಂದ ಬೆಂಗಳೂರಿಗೆ ಸಾಗುತ್ತಿರುವ ಪಂಚಲಕ್ಷ ಪಾದಯಾತ್ರೆ ಗುರುವಾರ ಸಂಜೆ ನಗರಕ್ಕೆ ಬಂದಾಗ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇದುವರೆಗೆ ಲಿಂಗಾಯತ ಸಮುದಾಯದ ಎಂಟು ಜನ ಮುಖ್ಯಮಂತ್ರಿಯಾಗಿದ್ದಾರೆ. ಬೇರೆ ಯಾರೂ ಲಿಂಗಾಯತ ಸಮುದಾಯವನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ತಮ್ಮನ್ನು ಮುಖ್ಯಮಂತ್ರಿ ಮಾಡಲು ಪಂಚಮಸಾಲಿ ಸಮುದಾಯದವರು ತ್ಯಾಗ ಮಾಡಿದ್ದಾರೆ ಎಂಬುದನ್ನು ಯಡಿಯೂರಪ್ಪ ಮರೆಯಬಾರದು’ ಎಂದು ಹೇಳಿದರು.

ADVERTISEMENT

ಇದಕ್ಕೂ ಮೊದಲು ಪಾದಯಾತ್ರೆಯಲ್ಲಿ ಮಾತನಾಡಿದ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌, ‘ಯಡಿಯೂರಪ್ಪ ಕೇಂದ್ರ ಸರ್ಕಾರವನ್ನು ಬ್ಲ್ಯಾಕ್‌ಮೇಲ್‌ ಮಾಡಲು ಹಾಗೂ ಮತ ಪಡೆಯಲು ಮಾತ್ರ ಲಿಂಗಾಯತ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ. ಲಿಂಗಾಯತ ಸಮಾಜದ ಮತ ಬ್ಯಾಂಕ್‍ ಭದ್ರಪಡಿಸಿಕೊಳ್ಳಲು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ನಿಗಮದಲ್ಲಿ ವಿಷ ಕುಡಿಯಲು ಕೂಡ ಹಣವಿಲ್ಲ ಎಂದು ಸಮಾಜದ ನಾಯಕರು ಗೊಣಗಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ನೌಕರರ ಸಂಬಳ ನೀಡಲು ಸರ್ಕಾರದ ಬಳಿ ಹಣವಿಲ್ಲ. ಹೀಗಿರುವಾಗ ಲಿಂಗಾಯತರ ಅಭಿವೃದ್ಧಿಗೆ ₹ 500 ಕೋಟಿ ಅನುದಾನವನ್ನು ಹೇಗೆ ನೀಡುತ್ತಾರೆ? ನಿಗಮ ಹಾಗೂ ಪ್ರಾಧಿಕಾರಗಳನ್ನು ಮಗನ ರಾಜಕೀಯ ಭವಿಷ್ಯಕ್ಕಾಗಿ ಸ್ಥಾಪಿಸಲಾಗುತ್ತಿದೆ’ ಎಂದು ಟೀಕಿಸಿದರು.

‘ಸಚಿವ ಸ್ಥಾನ ದೊರೆತ ಕೂಡಲೇ ಮುರುಗೇಶ್ ನಿರಾಣಿ ಅವರು ಪಾದಯಾತ್ರೆ ಹೋರಾಟ ಬೇಡ, ಚರ್ಚೆ ಮಾಡಿ ಬಗೆಹರಿಸೋಣ ಎಂದು ಹೇಳಿಕೆ ನೀಡಿರುವುದು ಅವರ ಸ್ವಾರ್ಥ ಚಿಂತನೆಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ, ಸಮಾಜಕ್ಕೆ ನ್ಯಾಯ ಒದಗಿಸುವ ಬದಲು ಬೆಂಗಳೂರಿನಲ್ಲಿ ಕತ್ತೆ ಕಾಯುತ್ತಿದ್ದಾರಾ’ ಎಂದು ಹರಿಹಾಯ್ದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸೇರಿ ಸಮಾಜದ ಗಣ್ಯರು ಪಾದಯಾತ್ರೆಯನ್ನು ಬರಮಾಡಿಕೊಂಡರು. ಪೂರ್ಣ ಕುಂಭ ಹೊತ್ತ ಮಹಿಳೆಯರು, ನಂದಿಕೋಲು, ಸಮಾಳ ಕಲಾವಿದರು ಮೆರವಣಿಗೆಯಲ್ಲಿ ಸಾಗಿದರು.

ಪಾದಯಾತ್ರೆ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್‌, ಶಾಸಕ ಬೇವಿನರದ ಸೋಮಣ್ಣ, ಮಾಜಿ ಸಂಸದ ಮಂಜುನಾಥ್ ಕುನ್ನೂರ್, ಶಾಸಕ ನಂದಿಹಳ್ಳಿ ಹಾಲಪ್ಪ, ದಾವಣಗೆರೆಯ ಮೇಯರ್ ಬಿ.ಜಿ.ಅಜಯ್ ಕುಮಾರ್ ಪಾಲ್ಗೊಂಡಿದ್ದರು.

ಸ್ವಾಮೀಜಿ 342 ಕಿ.ಮೀ. ಪಾದಯಾತ್ರೆ ನಡೆಸಿದ್ದು, ಶುಕ್ರವಾರ ಸಂಜೆ ದಾವಣಗೆರೆ ನಗರವನ್ನು ಪ್ರವೇಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.