ADVERTISEMENT

ಶಿವನು ವೇದ ಮೂಲದವನಲ್ಲ ಎಂಬುದು ಗೊತ್ತೇ:ಪ್ರತಾಪ ಸಿಂಹಗೆ ಎಸ್‌.ಎಂ.ಜಾಮದಾರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 16:21 IST
Last Updated 26 ಸೆಪ್ಟೆಂಬರ್ 2025, 16:21 IST
ಎಸ್‌.ಎಂ.ಜಾಮದಾರ
ಎಸ್‌.ಎಂ.ಜಾಮದಾರ   

ಬೆಂಗಳೂರು: ‘ಶಿವನು ವೇದ ಮೂಲದವನಲ್ಲ ಎನ್ನುವುದಾದರೂ ನಿಮಗೆ ಗೊತ್ತಿದೆಯೇ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಅವರು ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ.

‘ಪ್ರತಾಪ ಅವರೆ, ‘ಕಾವಿಧಾರಿಗಳೆ ನಿಮ್ಮ ದೇವರು ಯಾವುದು’ ಎಂದು ಪ್ರಶ್ನಿಸಿದ್ದೀರಿ. ಲಿಂಗಾಯತರ ‘ಶಿವ’ ಎಂಬ ದೇವರು, ‘ವೈದಿಕ’ರ ಶಿವನಲ್ಲ. ಋಗ್ವೇದದಲ್ಲಿ ಬರುವ ರುದ್ರನನ್ನು ನೀವೇ ಬಹುಕಾಲದ ನಂತರ ಶಿವ ಎಂದು ಹಲುಬಿದಿರಿ. ಆಗಮ ಮೂಲದ ಶಿವನೂ ನಿಮ್ಮ ಅನರ್ಥ ಅರ್ಥೈಸುವಿಕೆಯಿಂದ ಭಗ್ನನಾದನು. ಆ ನಂತರ ಬಂದ ಶ್ವೇತಾಶ್ವರ ಉಪನಿಷತ್ತಿನಲ್ಲಿ ಶಿವನ ಬಗ್ಗೆ ಒಂದಿಷ್ಟು ಮಾಹಿತಿಯಿದೆ. ಆದಾಗ್ಯೂ, ಹರಪ್ಪ, ಮಹೆಂಜದಾರೋಗಳ ಉತ್ಖನನದಲ್ಲಿ ದೊರೆತ ಶಿವಲಿಂಗಗಳು ವೇದಪೂರ್ವ ಕಾಲದವು ಎಂಬುದು ಜಗತ್ತೇ ತಿಳಿದಿದೆ’ ಎಂದಿದ್ದಾರೆ.

‘ಲಿಂಗಾಯತರ ಶಿವ ಬೂದಿಬಡುಕನಲ್ಲ. ಸ್ಮಶಾನದಲ್ಲಿ ಪಿಶಾಚಿಯಂತೆ ತಿರುಗುವವನಲ್ಲ. ಇವೆಲ್ಲ ಒಬ್ಬ ಶಿವನಿಗೆ ಕೊಟ್ಟ ಹೆಸರುಗಳು, ಹೆಸರಿಗೊಂದರಂತೆ ಬರೆದ ಕತೆಗಳು ಮತ್ತು ಶೈವ ಪುರಾಣಗಳ ಸೃಷ್ಟಿಗಳು. ಲಿಂಗಾಯತ ಶರಣರು ಈ ಪುರಾಣಗಳನ್ನು, ‘ಪುಂಡರ ಗೋಷ್ಠಿಗಳು’ ಎಂದು ಅವುಗಳನ್ನು ತಿರಸ್ಕರಿಸಿದ್ದಾರೆ’ ಎಂದಿದ್ದಾರೆ.

ADVERTISEMENT

‘ನಿಮ್ಮ ಸ್ವರ್ಗ–ನರಕಗಳನ್ನು ಶರಣರು ಅಲ್ಲಗೆಳೆದಿದ್ದಾರೆ. ಅಲ್ಲಮರ ವಚನಗಳಂತೂ ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತಗಳನ್ನು ತಿರಸ್ಕರಿಸುತ್ತವೆ. ಆದ್ದರಿಂದಲೇ ಲಿಂಗಾಯತರು ಸತ್ತಾಗ ‘ಲಿಂಗೈಕ್ಯ’ರಾಗುತ್ತಾರೆ. ವೀರಶೈವರು ಸತ್ತರೆ ‘ಸ್ವರ್ಗವಾಸಿ’ ಇಲ್ಲವೆ ‘ಕೈಲಾಸ ವಾಸಿ’ಯಾಗುತ್ತಾರೆ’ ಎಂದು ಜಾಮದಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.