ADVERTISEMENT

ಲಿಂಗಾಯತರು ಹಿಂದೂಗಳೂ ಅಲ್ಲ, ವೀರಶೈವರೂ ಅಲ್ಲ: ಜಾಗತಿಕ ಲಿಂಗಾಯತ ಮಹಾಸಭಾ

ಜಾತಿವಾರು ಸಮೀಕ್ಷೆಯಲ್ಲಿ ‘ಲಿಂಗಾಯತ ಧರ್ಮ’ ಎಂದೇ ಬರೆಯಿಸಲು ಜಾಗತಿಕ ಲಿಂಗಾಯತ ಮಹಾಸಭಾ ಕರೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 15:28 IST
Last Updated 11 ಸೆಪ್ಟೆಂಬರ್ 2025, 15:28 IST
<div class="paragraphs"><p>ಅಖಿಲ ಭಾರತ ವೀರಶೈವ ಲಿಂಗಾಯತ&nbsp;ಮಹಾಸಭಾ</p></div>

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

   

(ಫೇಸ್‌ಬುಕ್‌ ಚಿತ್ರ)

ಬೆಂಗಳೂರು: ‘ಹಿಂದೂಗಳೂ ಅಲ್ಲ, ವೀರಶೈವರೂ ಅಲ್ಲದ ಲಿಂಗಾಯರು ಜಾತಿವಾರು ಸಮೀಕ್ಷೆ ವೇಳೆ ತಮ್ಮ ಧರ್ಮ ‘ಲಿಂಗಾಯತ ಧರ್ಮ’ ಎಂದೇ ಬರೆಯಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕರೆ ನೀಡಿದೆ.

ADVERTISEMENT

ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ ಅವರು  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ವೀರಶೈವ–ಲಿಂಗಾಯತರು ಹಿಂದೂಗಳಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈಚೆಗೆ ಕರೆ ನೀಡಿದೆ. ಲಿಂಗಾಯತರು ಹಿಂದೂಗಳಲ್ಲ ಎಂಬುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅವರದ್ದು ವೀರಶೈವ ಲಿಂಗಾಯತ ಧರ್ಮ ಎಂದು ಹೇಳಿರುವುದನ್ನು ತಿರಸ್ಕರಿಸುತ್ತೇವೆ’ ಎಂದರು.

‘ಲಿಂಗಾಯತ ಮತ್ತು ವೀರಶೈವ ಎರಡೂ ಸಂಪೂರ್ಣ ಬೇರೆ–ಬೇರೆ. 1952ರಲ್ಲಿ ಹಿಂದೂ ಸಂಹಿತೆ ಮೇಲಿನ ಚರ್ಚೆಯ ವೇಳೆ ಮಸೂದೆಯಲ್ಲಿದ್ದ ಲಿಂಗಾಯತ ಎಂಬ ಪದವನ್ನು ತೆಗೆದುಹಾಕಬೇಕು ಎಂಬ ವಿಷಯ ಮುನ್ನೆಲೆಗೆ ಬಂದಿತ್ತು. ಆದರೆ ಅದು ವಿಫಲವಾಗಿ, ವೀರಶೈವ ಮತ್ತು ಲಿಂಗಾಯತ ಬೇರೆ–ಬೇರೆಯೇ ಎಂಬುದು ಕಾನೂನಿನಲ್ಲಿ ಉಳಿಯಿತು’ ಎಂದು ವಿವರಿಸಿದರು.

‘ವೀರಶೈವರೂ ಲಿಂಗಾಯತರೂ ಒಂದೇ ಎಂದು ಹೇಳುವ ಮೂಲಕ ತಮ್ಮ ಸಂಖ್ಯೆಯನ್ನು ಹೆಚ್ಚು ಎಂದು ತೋರಿಸಿಕೊಳ್ಳಲು ಕೆಲವರು ಸಂಚು ರೂ‍ಪಿಸುತ್ತಿದ್ದಾರೆ. ಅವರ ಸಂಚಿಗೆ ಲಿಂಗಾಯತರು ಬಲಿಯಾಗಬಾರದು. ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ‘ಇತರೆ’ ಆಯ್ಕೆಮಾಡಿಕೊಳ್ಳಬೇಕು ಮತ್ತು ಅದರ ಮುಂದೆ ‘ಲಿಂಗಾಯತ ಧರ್ಮ’ ಎಂದು ಬರೆಯಿಸಬೇಕು. ಜತೆಗೆ, ಜಾತಿಯ ಕಾಲಂನಲ್ಲಿ ನಿಮ್ಮ–ನಿಮ್ಮ ಜಾತಿಗಳ ಹೆಸರನ್ನು ಬರೆಸಬೇಕು’ ಎಂದರು.

‘ರಂಭಾಪುರಿ ಶ್ರೀ ಅವರ ಶಾಲಾ ದಾಖಲೆಗಳಲ್ಲಿ ಲಿಂಗಾಯತ ಎಂದು ಇದೆ. ಮುಂದೆ ಅದನ್ನು ಅವರು ಬೇಡ ಜಂಗಮ ಎಂದು ಬದಲಿಸಿಕೊಂಡಿದ್ದಾರೆ. ಈಗ ವೀರಶೈವ ಲಿಂಗಾಯತ ಎನ್ನುತ್ತಿದ್ದಾರೆ. ಬಸವಣ್ಣನ ತತ್ವವನ್ನು ಒಪ್ಪದ ಪಂಚಾಚಾರ್ಯರನ್ನು ಲಿಂಗಾಯತರೂ ಒಪ್ಪಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.