ಹುಬ್ಬಳ್ಳಿ: ‘12ನೇ ಶತಮಾನದಲ್ಲೇ ಹುಟ್ಟಿದ ಲಿಂಗಾಯತ ಧರ್ಮ ಈಗ ಸ್ವತಂತ್ರವಾಗಬೇಕಿಲ್ಲ. ಆದರೆ, ಕಾನೂನು ಮಾನ್ಯತೆ ಸಿಗಬೇಕಿದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಲಿಂಗಾಯತ ಒಳಪಂಗಡಗಳ ಒಕ್ಕೂಟ ಶನಿವಾರ ಇಲ್ಲಿ ಏರ್ಪಡಿಸಿದ್ದ ‘ಲಿಂಗಾಯತರಿಗೆ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ವೇದಿಕೆ’ಯ ಉದ್ಘಾಟನಾ ಸಮಾರಂಭದಲ್ಲಿ ಅವರು, ‘ಲಿಂಗಾಯತ ಸ್ವತಂತ್ರ ಧರ್ಮ. ಅದು ಹಿಂದೂ ಧರ್ಮದ ವ್ಯಾಪ್ತಿಗೆ ಬರುವುದಿಲ್ಲ. ಹಿಂದೂ ಎಂಬುದು ಧರ್ಮವಲ್ಲ’ ಎಂದರು.
‘ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಪ್ರಕಾರ, ಲಿಂಗಾಯತರ ಜನಸಂಖ್ಯೆ 60 ಲಕ್ಷ ಎಂದಿದೆ. ಎಚ್ಚೆತ್ತುಕೊಳ್ಳದಿದ್ದರೆ, ಅದು 30 ಲಕ್ಷಕ್ಕೆ ಇಳಿಯಲಿದೆ’ ಎಂದರು.
‘ಲಿಂಗಾಯತ ಎಂದು ಬರೆಸಿದರೆ ಸೌಲಭ್ಯಗಳು ಕಡಿಮೆಯಾಗಲಿವೆ ಎಂಬ ತಪ್ಪು ಕಲ್ಪನೆ ವಿರುದ್ಧ ಜಾಗೃತಿ ಮೂಡಿಸಲು ಸೆ.1ರಿಂದ ಬಸವನ ಬಾಗೇವಾಡಿಯಿಂದ ಬಸವ ಸಂಸ್ಕೃತಿ ಅಭಿಯಾನ ಆರಂಭಿಸುತ್ತೇವೆ. ಬೆಂಗಳೂರಿನಲ್ಲಿ ಅ.5ರಂದು ಅಭಿಯಾನ ಸಮಾರೋಪವಾಗಲಿದೆ’ ಎಂದರು.
‘ಜಾತಿ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಉಪ ಪಂಗಡ ನಮೂದಿಸಬೇಕು. ಹಿಂದೂ ಲಿಂಗಾಯತ, ವೀರಶೈವ ಲಿಂಗಾಯತ ಎಂದು ಬರೆಸಬಾರದು. ನಮ್ಮ ಧರ್ಮ ಲಿಂಗಾಯತ, ಧರ್ಮಗುರು ಬಸವಣ್ಣ, ಲಾಂಛನ ಇಷ್ಟಲಿಂಗ, ಧರ್ಮ ನೀತಿ ಸಂಹಿತೆ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ. ಸಮಾಜದ ಹಿರಿಯರು ಇದನ್ನು ಯುವಜನರಿಗೆ ತಿಳಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.