ADVERTISEMENT

ತಂಟೆಗೆ ಬರಬೇಡಿ: ಡಿಕೆ ಶಿವಕುಮಾರ್‌ಗೆ ಲಿಂಗಾಯತ ಮಹಾಸಭಾ ಎಚ್ಚರಿಕೆ

ಲಿಂಗಾಯತರ ಬೆನ್ನಿಗೆ ನಿಂತ ಎಂಪಿಸಿಸಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 6:27 IST
Last Updated 15 ಏಪ್ರಿಲ್ 2019, 6:27 IST
   

ಬೆಂಗಳೂರು: 'ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಲಿಂಗಾಯತರ ವಿಚಾರದಲ್ಲಿ ಕೈ ಹಾಕಬಹುದಾದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈ ವಿಷಯದಲ್ಲಿ ಏಕೆ ಹೊರಗುಳಿಯಬೇಕು' ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಶ್ನಿಸಿದೆ.

‘ರಾಜಕಾರಣದಲ್ಲಿ ಧರ್ಮ ಇರಬೇಕೆ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನನ್ನ ಸ್ಪಷ್ಟ ನಿಲುವು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಪಾಟೀಲ, ‘ಡಿ.ಕೆ‌.ಶಿವಕುಮಾರ್ ಲಿಂಗಾಯತರ ತಂಟೆಗೆ ಬರಬಾರದು’ ಎಂದು ಎಚ್ಚರಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ಬಯಸಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಪ್ರಯತ್ನಿಸಿದಾಗ ಇಬ್ಬರೂ ಕರೆ ಸ್ವೀಕರಿಸಲಿಲ್ಲ.

ADVERTISEMENT

ಎಂಪಿಸಿಸಿ ನಿರ್ಣಯ: ‘ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಹಕ್ಕೊತ್ತಾಯವನ್ನು ಈಡೇರಿಸಲಾಗುವುದು’ ಎಂದು ಎಂಪಿಸಿಸಿ ಅಲ್ಲಿನ ಲಿಂಗಾಯತ ಸಮುದಾಯಕ್ಕೆ ಲಿಖಿತ ಭರವಸೆ ನೀಡಿದೆ.

ಎಂಪಿಸಿಸಿ ಅಧ್ಯಕ್ಷ ಅಶೋಕ್ ಚವ್ಹಾಣ್ ಮತ್ತು ಲಿಂಗಾಯತ ಸಮನ್ವಯ ಸಮಿತಿ ಪರವಾಗಿ ಶತಾಯುಷಿ ಹಾಗೂ ‘ರಾಷ್ಟ್ರಸಂತ’ ಎಂದೇ ಹೆಸರಾಗಿರುವ ಶಿವಲಿಂಗ ಶಿವಾಚಾರ್ಯಶ್ರೀಗಳು ಈ ಕುರಿತ ಪತ್ರಕ್ಕೆ ಸಹಿ ಹಾಕಿದ್ದಾರೆ.

‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ’ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

ನಿರ್ಣಾಯಕ: ಮಹಾರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಶೇ 10ರಷ್ಟು ಲಿಂಗಾಯತರಿದ್ದಾರೆ. ಅಲ್ಲಿನ13 ಲೋಕಸಭಾ ಕ್ಷೇತ್ರಗಳಲ್ಲಿ ಇವರ ಮತಗಳು ನಿರ್ಣಾಯಕ ಎನಿಸಿವೆ.

ಕಾಂಗ್ರೆಸ್ ನಲ್ಲಿ ದ್ವಂದ್ವ ಇದೆಯೆ?
‘ಮಹಾರಾಷ್ಟ್ರ ಮತ್ತು ಕರ್ನಾಟಕ ಕಾಂಗ್ರೆಸ್ ತಮ್ಮ ನಿಲುವುಗಳಲ್ಲಿ ಹೇಗೆ ಭಿನ್ನತೆ ಹೊಂದಲು ಸಾಧ್ಯ’ ಎಂದು ಬಸವ ಬಳಗದ ಕಾರ್ಯದರ್ಶಿ ಮಹಾಂತೇಶ ಅಗಡಿ ಪ್ರಶ್ನಿಸಿದ್ದಾರೆ.

‘ಜಾತಿ ಧರ್ಮದ ವಿಚಾರದಲ್ಲಿ ಇನ್ನು ಮುಂದೆ ಮೂಗು ತೂರಿಸುವುದಿಲ್ಲ ಎಂದು ಹೇಳಲು ಡಿ.ಕೆ.ಶಿವಕುಮಾರ್ ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ ಎಂಬುದನ್ನು ಕೆಪಿಸಿಸಿ ಸ್ಪಷ್ಟಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ‌.

ತಕರಾರಿಗೆ ಮುಕ್ತವಾಗಿರುವ ವ್ಯಾಜ್ಯ
ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವತತ್ವ ಅನುಸರಿಸುವವರು) ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಬೆನ್ನಲ್ಲೇ ಈ ಕುರಿತಂತೆ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಕಳೆದ ವರ್ಷ ಡಿಸೆಂಬರ್ 10ರಂದುವಿಲೇವಾರಿ ಮಾಡಿತ್ತು.

‘ಲಿಂಗಾಯತ-ವೀರಶೈವ ಬಣಗಳು ಭಿನ್ನ ಹೌದೋ ಅಲ್ಲವೋ ಎಂಬುದರ ಬಗೆಗಿನ ತಕರಾರನ್ನು ಸೂಕ್ತ ಪ್ರಕರಣದಲ್ಲಿ ಮತ್ತು ಸೂಕ್ತ ಸಮಯದಲ್ಲಿ ಬೇಕಾದವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.