
ಬೆಂಗಳೂರು: ಬಡ ಜನರ ದುಶ್ಚಟ ಬಿಡಿಸಲು ಪಣತೊಟ್ಟಿರುವ ದೇವನಹಳ್ಳಿ ಯುವಕ ಎಂ.ಪಿ.ಗಿರೀಶ್, ನಿಗದಿಪಡಿಸಿದ ಅವಧಿಯಲ್ಲಿ ಚಟ ಮುಕ್ತರಾಗುವವರನ್ನು ವಿಮಾನದಲ್ಲಿ ಮುಂಬೈಗೆ ಕರೆದೊಯ್ದು ಬಿ.ಆರ್.ಅಂಬೇಡ್ಕರ್ ಅವರ ಸಮಾಧಿ ಮುಂದೆ ಪ್ರತಿಜ್ಞಾ ವಿಧಿ ಬೋಧಿಸುತ್ತಿದ್ದಾರೆ.
ದುಶ್ಚಟ ಬಿಡುವ ‘ಭೀಮ ಸಂಕಲ್ಪ’ ಮಾಡಿದ್ದ 26 ಜನರ ಮೊದಲ ತಂಡ ಕಳೆದ ತಿಂಗಳು ಮುಂಬೈಗೆ ಪ್ರಯಾಣ ಬೆಳೆಸಿತ್ತು. ಅಂಬೇಡ್ಕರ್ ಸಮಾಧಿ ಸ್ಥಳ ‘ಚೈತ್ಯ ಭೂಮಿ’ಯಲ್ಲಿ ದುಶ್ಚಟ ಮುಕ್ತ ಸರಳ ಜೀವನ, ಅಂಬೇಡ್ಕರ್ ತತ್ವ–ಸಿದ್ಧಾಂತಗಳ ಪಾಲನೆ, ಸಂವಿಧಾನದ ಬೆಳಕಿನಲ್ಲಿ ನಡೆಯುವ ಪ್ರತಿಜ್ಞಾವಿಧಿ ಸ್ವೀಕರಿಸಿ ತಮ್ಮ ಗ್ರಾಮಗಳಿಗೆ ಮರಳಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಮಲ್ಲೇಪುರದ ಜಿ.ಎನ್.ಪ್ರಕಾಶ್–ಸರೋಜಮ್ಮ ದಂಪತಿ ಪುತ್ರ ಗಿರೀಶ್ ಕಾನೂನು ಪದವೀಧರ. ಕೃಷಿಯ ಜತೆಗೆ ಉದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು, ಪರಿಶಿಷ್ಟ ಜಾತಿಯ ತನ್ನ ಸಮುದಾಯದ ಜನರು ದುಶ್ಚಟಗಳಿಗೆ ಒಳಗಾಗಿ ಸಂಕಷ್ಟದ ಜೀವನ ನಡೆಸುವುದನ್ನು ತಡೆಯಲು ಕಂಡುಕೊಂಡ ಮಾರ್ಗವೇ ‘ಭೀಮ ಸಂಕಲ್ಪ’.
ದಲಿತ ಸಂಘರ್ಷ ಸಮಿತಿಯ ವಿದ್ಯಾರ್ಥಿ ವಿಭಾಗದ ಸಂಚಾಲಕರಾಗಿದ್ದ ಅವರು ಪರಿಶಿಷ್ಟ ಜಾತಿಯ ಬಹಳಷ್ಟು ಜನರು ಶಿಕ್ಷಣ ವಂಚಿತರಾಗಿದ್ದು, ಕಷ್ಟದ ಜೀವನ ಸಾಗಿಸುತ್ತಿರುವುದನ್ನು ಗಮನಿಸಿದ್ದರು. ಹಗಲೆಲ್ಲ ಮೈಮುರಿದು ದುಡಿದು, ಸಿಗುತ್ತಿದ್ದ ಕಡಿಮೆ ಕೂಲಿಯನ್ನು ಮದ್ಯಪಾನ, ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ತಂಬಾಕು ಉತ್ಪನ್ನಗಳಿಗೆ ಖರ್ಚು ಮಾಡುತ್ತಿದ್ದರು. ಸ್ವಂತ ಮನೆ ಇಲ್ಲದವರು, ಮನೆ ಇದ್ದರೂ ಸುಸ್ಥಿತಿಗೆ ತಂದುಕೊಳ್ಳದವರು, ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೆಲಸಕ್ಕೆ ಹಚ್ಚಿದವರು. ಅಂದಿನ ದುಡಿಮೆಯಲ್ಲೇ ಅಂದಿನ ಜೀವನ ಸಾಗಿಸುವ ಅವರ ಸ್ಥಿತಿ ಕಂಡು ಮರುಗಿದ್ದರು. ಇಂತಹ ಸಮಸ್ಯೆಗಳಿಗೆ ಮೂಲ ಕಾರಣ ದುಶ್ಚಟ ಎನ್ನುವುದನ್ನು ಅರ್ಥ ಮಾಡಿಕೊಂಡ ಅವರು ತನ್ನ ಸಮುದಾಯದ ಜನರ ದುಶ್ಚಟ ಬಿಡಿಸುವ ಪಣ ತೊಟ್ಟಿದ್ದಾರೆ.
‘ದುಶ್ಚಟ ಬಿಡಲು ಜನರು ದೇವರ ಮೊರೆ ಹೋಗುತ್ತಾರೆ. ಮಾಲೆ ಹಾಕುತ್ತಾರೆ. ನಾನು ಮೊದಲಿನಿಂದಲೂ ಅಂಬೇಡ್ಕರ್ ಅವರ ಅನುಯಾಯಿ. ಅವರೇ ನಮಗೆ ದೇವರು. ಅದಕ್ಕಾಗಿ ದುಶ್ಚಟ ಬಿಡುವ ಸಂಕಲ್ಪ ಮಾಡುವ ನನ್ನ ಜನರನ್ನು ಅಂಬೇಡ್ಕರ್ ಸಮಾಧಿ ಸ್ಥಳಕ್ಕೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದೆ. ಆರಂಭದಲ್ಲಿ ಏಳು ದಿನ ಎಲ್ಲ ಚಟಗಳನ್ನೂ ಬಿಡುವ ಷರತ್ತು ಹಾಕಿದೆ. ಶ್ವೇತವಸ್ತ್ರ ಧರಿಸಿ ಷರತ್ತು ಪೂರೈಸಿದ ಅವರನ್ನು ಕರೆದುಕೊಂಡು ಹೋಗಿ ಬಂದೆ’ ಎಂದು ತಮ್ಮ ಹೊಸ ಪ್ರಯೋಗದ ಹಾದಿಯನ್ನು ತೆರೆದಿಟ್ಟರು ಗಿರೀಶ್.
600 ಜನರಿಗೆ ವಿಮಾನಯಾನದ ಅನುಭವ
ನಾಲ್ಕು ವರ್ಷಗಳಿಂದ ತಮ್ಮ ಜನುಮ ದಿನವನ್ನು ಚೈತ್ಯ ಭೂಮಿಯಲ್ಲೇ ಆಚರಿಸುತ್ತಾ ಬಂದಿದ್ದ ಗಿರೀಶ್ ಅವರು ಪ್ರತಿ ವರ್ಷ 150 ಜನರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆಯೂ ವಿಮಾನ ಹತ್ತದ ಅಂತಹ 600ಕ್ಕೂ ಹೆಚಷ್ಚು ಜನರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈಗ ದುಶ್ಚಟ ಬಿಡಿಸುವ ನೆಪದಲ್ಲಿ ಅಂಬೇಡ್ಕರ್ ತತ್ವ ಸಿದ್ದಾಂತ ಸಂವಿಧಾನದ ಆಶಯಗಳನ್ನು ಪರಿಚಯಿಸುತ್ತಿದ್ದಾರೆ. ಹಾಗೆಯೇ ಒಂದು ಸುತ್ತು ಮುಂಬೈ ಪ್ರವಾಸವನ್ನೂ ಮಾಡಿಸುತ್ತಿದ್ದಾರೆ.
ದೇವರ ಹೆಸರಲ್ಲಿ ದುಶ್ಚಟ ಬಿಡುವವರನ್ನು ನೋಡಿದ್ದೆ. ಇದೇ ಮೊದಲ ಬಾರಿ ಅಂಬೇಡ್ಕರ್ ಹೆಸರಲ್ಲಿ ಇಂತಹ ಮನಪರಿವರ್ತನೆಯ ಹೊಸ ಹಾದಿ ತೆರೆಯಲಾಗಿದೆ. ಗಿರೀಶ್ ಸಂಕಲ್ಪವನ್ನು ದೇಶದ ಎಲ್ಲೆಡೆ ವಿಸ್ತರಿಸಬೇಕಿದೆ.ಭೀಮರಾವ್ ಯಶವಂತ್ ಅಂಬೇಡ್ಕರ್ (ಬಿ.ಆರ್.ಅಂಬೇಡ್ಕರ್ ಮೊಮ್ಮೊಗ)
ವಿಮಾನಯಾನ ಇದೇ ಮೊದಲ ಅನುಭವ. ಮುಂಬೈನ ತಾಜ್ ಹೋಟೆಲ್‌ನಲ್ಲಿ ಉಪಾಹಾರ ಕೊಡಿಸಿದರು. ಅಂಬೇಡ್ಕರ್ ಸಮಾಧಿಯ ದರ್ಶನದ ನಂತರ ಜೀವನಪೂರಾ ದುಶ್ಚಟ ತೊರೆಯಲು ನಿರ್ಧರಿಸಿರುವೆ.- ರಾಮಕೃಷ್ಣ ಸೂಲಿಬೆಲೆ
ಸಮುದಾಯದ ಜನರು ದುಶ್ವಟ ತೊರೆದು ನೆಮ್ಮದಿಯ ಬದುಕು ನಡೆಸಬೇಕು ಎನ್ನುದಷ್ಟೆ ಧ್ಯೇಯ. ಖರ್ಚು ವೆಚ್ಚದ ಲೆಕ್ಕ ಇಟ್ಟಿಲ್ಲ. ಈ ಸತ್ಕಾರ್ಯವನ್ನು ನಿರಂತರವಾಗಿ ಮುಂದುವರಿಸುವೆ- ಎಂ.ಪಿ.ಗಿರೀಶ್, ಮಲ್ಲೇಪುರ ದೇವನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.