ADVERTISEMENT

ಸಾಲ ವಸೂಲಾತಿ ಸಂಬಂಧ ವಿಜಯ್ ಮಲ್ಯ ಅರ್ಜಿ: ಬ್ಯಾಂಕ್‌ಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 14:53 IST
Last Updated 5 ಫೆಬ್ರುವರಿ 2025, 14:53 IST
ವಿಜಯ್ ಮಲ್ಯ
ವಿಜಯ್ ಮಲ್ಯ   

ಬೆಂಗಳೂರು: ‘ಕಿಂಗ್‌ಫಿಶರ್‌ ಏರ್‌ಲೈನ್ಸ್‌ಗೆ ಸಂಬಂಧಿಸಿದ ಸಾಲ ವಸೂಲಾತಿ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಕೋರಿ ಉದ್ಯಮಿ ವಿಜಯ್‌ ಮಲ್ಯ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಿ ಅಧಿಕಾರಿ ಹಾಗೂ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸೇರಿದಂತೆ ಒಟ್ಟು 10 ಬ್ಯಾಂಕ್‌ಗಳಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ, ಯುನೈಟೆಡ್‌ ಕಿಂಗ್ಡಮ್‌ನಲ್ಲಿನ ಹೆರ್ಟ್‌ಫೋರ್ಡ್‌ಶೈರ್ ಕೌಂಟಿಯ ಕ್ವೀನ್‌ ಹೂ ಲೇನ್‌ನಲ್ಲಿರುವ ಲೇಡಿವಾಕ್‌ ನಿವಾಸಿಯಾಗಿರುವ 70 ವರ್ಷದ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮಲ್ಯ ಪರ ಪದಾಂಕಿತ ಹಿರಿಯ ವಕೀಲ ಸಜನ್‌ ಪೂವಯ್ಯ ವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ, ಚೆನ್ನೈನ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಿ ಅಧಿಕಾರಿಗಳು, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ದಿ ಫೆಡರಲ್‌ ಬ್ಯಾಂಕ್‌ ಲಿಮಿಟೆಡ್‌, ಐಡಿಬಿಐ ಬ್ಯಾಂಕ್‌ ಲಿಮಿಟೆಡ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಜಮ್ಮು ಅಂಡ್‌ ಕಾಶ್ಮೀರ್‌ ಬ್ಯಾಂಕ್‌ ಲಿಮಿಟೆಡ್‌, ಪಂಜಾಬ್‌ ಅಂಡ್‌ ಸಿಂಧ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯುಕೊ ಬ್ಯಾಂಕ್‌, ಜೆ.ಎಂ.ಫೈನಾನ್ಶಿಯಲ್‌ ಅಸೆಟ್‌ ರಿ–ಕನಸ್ಟ್ರಕ್ಷನ್‌ ಕಂಪನಿ ಪ್ರೈ.ಲಿಮಿಟೆಡ್‌ ಹಾಗೂ ಯುಬಿಎಚ್‌ಎಲ್‌ನ ಅಧಿಕೃತ ಲಿಕ್ವಿಡೇಟರ್‌ಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.