
ಹುಬ್ಬಳ್ಳಿ: 'ಕೊಳಗೇರಿ ಮಂಡಳಿಯಿಂದ ನಿರ್ಮಿಸಿದ ಮನೆ ಹಂಚಿಕೆಯ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಬರುವವರಿಗೆ ಸರ್ಕಾರ ಮದ್ಯ ವಿತರಿಸಲು ಮುಂದಾಗಿದ್ದು, ಆ ಮೂಲಕ ಲಿಕ್ಕರ್ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ' ಎಂದು ಶಾಸಕ ಮಹೇಶ ಟೆಂಗಿನಕಾಯಿ ವ್ಯಂಗ್ಯವಾಡಿದರು.
'ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಎರಡೂವರೆ ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಎಲ್ಲ ಮದ್ಯ ವ್ಯಾಪಾರಸ್ಥರು ಹೆಚ್ಚುವರಿ ಮದ್ಯ ಸಂಗ್ರಹಿಸಿಟ್ಟುಕೊಳ್ಳಬೇಕು' ಎಂದು ಅಬಕಾರಿ ಇಲಾಖೆಯ ಹುಬ್ಬಳ್ಳಿ ರೇಂಜ್ 1 ವಾಟ್ಸ್‌ಆ್ಯಪ್ ಗ್ರೂಪ್‌ಲ್ಲಿ ಅಧಿಕಾರಿಯೊಬ್ಬರು ಸಂದೇಶ ಕಳುಹಿಸಿದ್ದಾರೆ' ಎಂದು ನಗರದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದರು.
'ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸಚಿವರು ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲಿದ್ದು, ಎಲ್ಲ ಮದ್ಯದ ಅಂಗಡಿಯವರು ಸಾಕಷ್ಟು ಪ್ರಮಾಣದಲ್ಲಿ ಮದ್ಯ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ ಎಂದರೆ, ರಾಜ್ಯದಲ್ಲಿ ಏನು ನಡೆಯುತ್ತಿದೆ? ಸರ್ಕಾರಕ್ಕೆ ಲಿಕ್ಕರ್ ಹಂಚಿಕೆ ಮುಖ್ಯವೋ, ಮನೆ ಹಂಚಿಕೆ ಮುಖ್ಯವೋ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು' ಎಂದು ಆಗ್ರಹಿಸಿದರು.
'ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸ್ಥಳೀಯವಾಗಿ ಇಲ್ಲದಿರುವುದನ್ನು ನೋಡಿ, ತರಾತುರಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ. ಈ ಹಿಂದೆ ಕೆಲವು ಕಾರಣಗಳಿಂದ ಎರಡು-ಮೂರು ಬಾರಿ ಕಾರ್ಯಕ್ರಮ ಮುಂದೂಡಲಾಗಿತ್ತು. ಅದೇ ರೀತಿ ಈ ಬಾರಿಯೂ ಮುಂದೂಡಬಹುದಿತ್ತು. ಉದ್ದೇಶಪೂರ್ವಕವಾಗಿ ಕೇಂದ್ರ ಸಚಿವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು.
ಮುಖಂಡರಾದ ರಾಮಣ್ಣ ಗೌಡರ, ರವಿ ನಾಯ್ಕ, ಪ್ರವೀಣ ಪವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.