ADVERTISEMENT

ಒಂದೇ ಸ್ಥಳದಲ್ಲಿ ಐದು ವರ್ಷ ಕರ್ತವ್ಯ: ಅಧಿಕಾರಿಗಳ ಪಟ್ಟಿ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 15:34 IST
Last Updated 14 ಜುಲೈ 2024, 15:34 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಒಂದೇ ಹುದ್ದೆ ಅಥವಾ ಒಂದೇ ಸ್ಥಳದಲ್ಲಿ ಐದು ವರ್ಷಕ್ಕಿಂತ ಹೆಚ್ಚು ಅವಧಿ ಕರ್ತವ್ಯದಲ್ಲಿ ಇರುವ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಟ್ಟಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಅಂತಹ ಸಿಬ್ಬಂದಿ ವರ್ಗಾವಣೆ ಅಗತ್ಯವಿದ್ದರೆ, ಸಂಬಂಧಿಸಿದ ಪ್ರಸ್ತಾವನೆಯನ್ನೂ ಸಲ್ಲಿಸಿ ಎಂದು ಸೂಚಿಸಿದೆ.

ADVERTISEMENT

ದೀರ್ಘಾವಧಿ ಒಂದೇ ಸ್ಥಳದಲ್ಲಿರುವ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ. ಇದೇ 8ರಂದು ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯಿತಿ ಸಿಇಒಗಳ ಜತೆಗೆ ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ದೂರುಗಳ ವಿಚಾರವು ಪ್ರಸ್ತಾಪವಾಗಿತ್ತು.

ಸಿಬ್ಬಂದಿ ವಿರುದ್ಧ ಬಂದಿರುವ ದೂರುಗಳು ಮತ್ತು ಅವರ ಕರ್ತವ್ಯದ ಅವಧಿ ವಿವರಗಳನ್ನು ಸಿದ್ದಪಡಿಸಿ. ಅಂತಹವರ  ವಿರುದ್ಧ ಶಿಸ್ತುಕ್ರಮ ಹಾಗೂ ಅಗತ್ಯವಿದ್ದರೆ ವರ್ಗಾವಣೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿ ಎಂದು ಮುಖ್ಯಮಂತ್ರಿ ಅಂದಿನ ಸಭೆಯಲ್ಲಿ ಸೂಚಿಸಿದ್ದರು. 

ಈ ಸೂಚನೆಯಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಇದೇ ಬುಧವಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕಚೇರಿಯಲ್ಲಿ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಶಿಸ್ತು ಪಾಲನೆಯನ್ನು ಅನುಷ್ಠಾನಕ್ಕೆ ತರಲು ಶಿಸ್ತುಕ್ರಮ ತೆಗೆದುಕೊಳ್ಳಿ ಎಂದೂ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.