ADVERTISEMENT

ಹುಬ್ಬಳ್ಳಿ, ಚಿಕ್ಕಬಳ್ಳಾಪುರದಲ್ಲಿ ಲಿಥಿಯಂ ಬ್ಯಾಟರಿ ಘಟಕ: ಡಿಸಿಎಂ

ಶೀಘ್ರವೇ ಹೊಸ ಇಂಧನ ನೀತಿ: ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 17:51 IST
Last Updated 30 ಜನವರಿ 2021, 17:51 IST
ಸಿ.ಎನ್. ಅಶ್ವತ್ಥನಾರಾಯಣ ಅವರು ವಿಧಾನಸೌಧದ ಬಳಿ ಸ್ವತಃ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡುವ ಮೂಲಕ ಎಲೆಕ್ಟ್ರಿಕ್ ವಾಹನಗಳ ರ್‍ಯಾಲಿಗೆ ಶನಿವಾರ ಚಾಲನೆ ನೀಡಿದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ನಾಯ್ಡು ಇದ್ದಾರೆ -ಪ್ರಜಾವಾಣಿ ಚಿತ್ರಗಳು
ಸಿ.ಎನ್. ಅಶ್ವತ್ಥನಾರಾಯಣ ಅವರು ವಿಧಾನಸೌಧದ ಬಳಿ ಸ್ವತಃ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡುವ ಮೂಲಕ ಎಲೆಕ್ಟ್ರಿಕ್ ವಾಹನಗಳ ರ್‍ಯಾಲಿಗೆ ಶನಿವಾರ ಚಾಲನೆ ನೀಡಿದರು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ನಾಯ್ಡು ಇದ್ದಾರೆ -ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ವಾಯುಮಾಲಿನ್ಯವನ್ನು ನಿವಾರಿಸಲು ಎಲೆಕ್ಟ್ರಿಕ್ ವಾಹನ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಲಿಥಿಯಂ ಬ್ಯಾಟರಿ ತಯಾರಿಸುವ ಘಟಕಗಳನ್ನು ಹುಬ್ಬಳ್ಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ರೋಟರಿ ಜಿಲ್ಲೆ 3190ರ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಎಲೆಕ್ಟ್ರಿಕ್ ವಾಹನಗಳ ರ್‍ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು 2018ರಲ್ಲಿಯೇ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಕ್ರಮ ಕೈಗೊಂಡ ಮೊದಲ ರಾಜ್ಯವೆಂಬ ಹೆಗ್ಗಳಿಕೆ ನಮ್ಮದು. ಸರ್ಕಾವು ಇಂಧನ ನೀತಿಯನ್ನು ರೂಪಿಸುತ್ತಿದ್ದು, ಶೀಘ್ರವೇ ಜಾರಿಗೆ ಬರಲಿದೆ’ ಎಂದರು.

ADVERTISEMENT

‘ಬ್ಯಾಟರಿ ಚಾರ್ಜಿಂಗ್‌ ಕೇಂದ್ರಗಳಲ್ಲಿ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತಿದೆ. ವಾಣಿಜ್ಯ ಬಳಕೆಯ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹9 ಇದ್ದರೆ, ವಿದ್ಯುನ್ಮಾನ ವಾಹನಗಳಿಗೆ ₹5 ‌ದರದಲ್ಲಿ ಒದಗಿಸಲಾಗುತ್ತಿದೆ’ ಎಂದರು.

‘ವಿದ್ಯುನ್ಮಾನ ವಾಹನಗಳ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ತಯಾರಕರು ವಾಹನವನ್ನು ಮಾತ್ರ ನೀಡಲಿದ್ದಾರೆ. ಗ್ರಾಹಕರು ಬ್ಯಾಟರಿಯನ್ನು ಬಾಡಿಗೆಗೆ ಪಡೆದು ವಾಹನ ಚಲಾಯಿಸುವ ದಿನಗಳು ದೂರವಿಲ್ಲ. ಅಲ್ಲಲ್ಲಿಪೆಟ್ರೋಲ್ ಬಂಕ್‌ಗಳಂತೆ ‘ಬ್ಯಾಟರಿ ಬ್ಯಾಂಕ್’ಗಳು ಸ್ಥಾಪನೆಯಾಗಲಿವೆ. ಮೊದಲೇ ಚಾರ್ಚ್ ಮಾಡಿರುವ ಬ್ಯಾಟರಿಯನ್ನು ಅಲ್ಲಿ ವಾಹನಕ್ಕೆ ಅಳವಡಿಸಿಕೊಂಡು ಪ್ರಯಾಣ ಮುಂದುವರಿಸಬಹುದು. ಬಳಿಕ ಎಲೆಕ್ಟ್ರಿಕ್ ವಾಹನಗಳ ದರವೂ ತುಂಬಾ ಕಡಿಮೆಯಾಗಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.