ADVERTISEMENT

ಕಲಬುರ್ಗಿ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಮಿತಿಮೀರಿದ ಸೋಂಕಿತರ ಸಂಖ್ಯೆ, ಲಾಕ್‌ಡೌನ್‌ಗೆ ಹಲವರ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 4:08 IST
Last Updated 12 ಜುಲೈ 2020, 4:08 IST
ಬಿ.ಶರತ್‌
ಬಿ.ಶರತ್‌   

ಕಲಬುರ್ಗಿ: ಬೆಂಗಳೂರು ನಗರವನ್ನು ಲಾಕ್‌ಡೌನ್‌ ಮಾಡಿದ ಬೆನ್ನಲ್ಲೇ ಕಲಬುರ್ಗಿ ಜಿಲ್ಲೆಯಲ್ಲೂ ಮತ್ತೊಮ್ಮೆ ಲಾಕ್‌ಡೌನ್‌ ಜಾರಿ ಆಗಲಿದೆಯೇ ಎಂಬ ಸುದ್ದಿ ತೀವ್ರ ಚರ್ಚೆಗೆ ಒಳಗಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ನಗರದ ಬಹುಬೇಕು ಜನರು ಲಾಕ್‌ಡೌನ್‌ ತಕ್ಷಣವೇ ಜಾರಿ ಆಗಬೇಕು ಎಂದಿದ್ದಾರೆ.

ಜಿಲ್ಲಾಧಿಕಾರಿ ಬಿ.ಶರತ್‌ ಪ್ರತಿಕ್ರಿಯೆ ನೀಡಿ, ‘ಜಿಲ್ಲೆಯನ್ನು ಲಾಕ್‌ಡೌನ್‌ ಮಾಡುವ ಬಗ್ಗೆ ಸೋಮವಾರ ಮುಖ್ಯಮಂತ್ರಿ ಅವರು ವಿಡಿಯೊ ಸಂವಾದ ಸಭೆ ಕರೆದಿದ್ದಾರೆ. ಅಲ್ಲಿ ನಮ್ಮಿಂದ ಮಾಹಿತಿ ಸಂಗ್ರಹಿಸಿ, ಅವರೇ ನಿರ್ಧಾರ ಕೈಗೊಳ್ಳುವರು. ಗ್ರಾಮಗಳಿಗಿಂತ ಈಗ ನಗರದಲ್ಲೇ ಹೆಚ್ಚು ಸೋಂಕಿತರು ಕಂಡುಬರುತ್ತಿದ್ದಾರೆ. ಅದರಲ್ಲೂ ಸಂಪರ್ಕ ಸಿಗದೇ ಇರುವ ಪ್ರಕರಣಗಳು ಹೆಚ್ಚುತ್ತಿವೆ. ಒಂದು ವೇಳೆ ಲಾಕ್‌ಡೌನ್‌ ಮಾಡಿದರೆ, ನಗರವನ್ನಷ್ಟೇ ಮಾಡಬೇಕೆ? ಕಂಟೇನ್ಮೆಂಟ್‌ ವಲಯವಾರು ಮಾಡಬೇಕೆ ಅಥವಾ ಇಡೀ ಜಿಲ್ಲೆ ಮಾಡಬೇಕೆ? ಎಂಬ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ಮಾರ್ಗದರ್ಶನದಂತೆ ನಡೆಯಲಾಗುವುದು’ ಎಂದರು.

ಲಾಕ್‌ಡೌನ್‌ ತೆರವುಗೊಳಿಸಿದ ಸಂದರ್ಭದಲ್ಲಿ (ಜೂನ್ 1) ಕೋವಿಡ್ ಸೋಂಕಿತರ ಸಂಖ್ಯೆ ನೂರರ ಹತ್ತಿರವಿತ್ತು. ಆದರೆ, ಅಲ್ಲಿಂದ ಒಂದೇ ತಿಂಗಳಲ್ಲಿ ಸಾವಿರದ ಗಡಿ ದಾಟಿತು. 15 ದಿನಗಳಲ್ಲಿ ನಗರದಲ್ಲೇ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಒಂದೂವರೆ ತಿಂಗಳಲ್ಲಿ 2,000 ಸಮೀಪ ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ಸಾವಿರಾರು ಮಂದಿಯಿ ಗಂಟಲು ದ್ರವ ಮಾದರಿ ತಪಾಸಣೆ ಮತ್ತು ವರದಿ ಬಾಕಿಯಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ, ಈಗ ಮತ್ತೆ ಲಾಕ್‌ಡೌನ್‌ ಮಾಡದಿದ್ದರೆ ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ ಎನ್ನುವುದು ತಜ್ಞರ ಅಭಿಮತ.

ADVERTISEMENT

‘ಬೆಂಗಳೂರಿನಷ್ಟೇ ಕಲಬುರ್ಗಿ ಸ್ಥಿತಿಯೂ ಬಿಗಡಾಯಿಸಿದೆ. ನಿತ್ಯ ಸಾವಿರದಷ್ಟು ಜನ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುತ್ತಿದ್ದಾರೆ. ಈಗಾಗಲೇ ಜನ ಸಮುದಾಯದ ಮಧ್ಯೆ ಗೊತ್ತಿಲ್ಲದಂತೆಯೇ ಹಲವರಿಗೆ ಕೋವಿಡ್‌ ಅಂಟಿಕೊಂಡಿದೆ. ಪ್ರತಿ ಭಾನುವಾರ ಮಾತ್ರ ಮಾತ್ರ ಪ್ರಯೋಜನವಿಲ್ಲ’ ಎಂದೂ ಹೇಳಿದ್ದಾರೆ.

‘ಈ ಹಿಂದೆ ಇದ್ದ ಲಾಕ್‌ಡೌನ್‌ ತೆರವುಗೊಳಿಸಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಿತು. ಇನ್ನೆರಡು ವಾರ ಮುಂದುವರಿಸಿದ್ದರೆ ಸಾಕಷ್ಟು ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಕೋವಿಡ್‌ ಸೋಂಕು ತೀವ್ರ ತಾರಕಕ್ಕೇರಿದ ಸಂದರ್ಭದಲ್ಲೇ ಲಾಕ್‌ಡೌನ್‌ ತೆರವು ಮಾಡಿದ್ದು ದೊಡ್ಡ ತಪ್ಪು. ಈಗ ಅದರ ಫಲ ನಾವು ಅನುಭವಿಸುತ್ತಿದ್ದೇವೆ’ ಎಂದು‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸದ್ಯಕ್ಕೆ ಜಿಲ್ಲೆಯಲ್ಲಿ ಹಬ್ಬುತ್ತಿರುವ ಸೋಂಕಿಗೆ ವಲಸಿಗರೇ ಕಾರಣ. ಮಹಾರಾಷ್ಟ್ರದಿಂದ ಬಂದವರು ಕ್ವಾರಂಟೈನ್‌ ಕೇಂದ್ರಗಳಲ್ಲಿ ಉಳಿಯಲಿಲ್ಲ. ಹೋಂ ಕ್ವಾರಂಟೈನ್‌ ಪಾಲಿಸಲಿಲ್ಲ. ಮಾತ್ರವಲ್ಲ, ಅವರ ಗಂಟಲು ಮಾದರಿ ತಪಾಸಣೆ ಮಾಡುವ ಮುನ್ನವೇ ಜಿಲ್ಲಾಡಳಿತ ಎಲ್ಲರನ್ನೂ ಮನೆಗೆ ಬಿಬಿಟ್ಟಿತು. ಇದು ತೀವ್ರ ಆಘಾತಕಾರಿ ಸಂಗತಿ. ಪರಿಣಾಮ, ಈಗ ಜಿಲ್ಲೆಯಲ್ಲಿ ಸಮುದಾಯಕ್ಕೇ ಸೋಂಕು ಅಂಟಿಕೊಂಡಿದೆ. ಈಗಲಾದರೂ ಲಾಕ್‌ಡೌನ್ ಮಾಡಿ, ಸೋಂಕು ನಿಯಂತ್ರಿಸಿ’ ಎಂದು ಪ್ರಭುಶಂಕರ ಗುತ್ತೇದಾರ ಅಭಿಪ್ರಾಯ ಪಟ್ಟರು.

ತಕ್ಷಣ ಲಾಕ್‌ಡೌನ್‌ಗೆ ಮನವರಿಕೆ

ಜಿಲ್ಲೆಯಲ್ಲಿ ಕೋವಿಡ್‌ ಕೈ ಮೀರುತ್ತಿದೆ. ಬೆಂಗಳೂರಿಗಿಂತ ಮುಂಚಿತವಾಗಿ ಕಲಬುರ್ಗಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಲಾಕ್‌ಡೌನ್‌ ಮಾಡಬೇಕು. ಕೇಂಟೇನ್ಮೆಂಟ್‌ ಝೋನ್‌ಗಳನ್ನು ಪೂರ್ಣ ಸೀಲ್‌ಡೌನ್‌ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡುತ್ತೇನೆ. ಜಿಲ್ಲೆಯ ಇಬ್ಬರು ಶಾಸಕರಿಗೂ ಕೋವಿಡ್‌ ಅಂಟಿಕೊಂಡಿದ್ದು, ಕಳವಳಕಾರಿ. ಅವರು ಬೇಗ ಗುಣವಾಗಲಿದ್ದಾರೆ. ನಾನು ಜನರ ಮಧ್ಯೆಯೇ ಇದ್ದು ಕೆಲಸ ಮಾಡುತ್ತೇನೆ. ನಾವೇ ಕ್ವಾರಂಟೈನ್‌ಗೆ ಒಳಗಾದರೆ ಜನರಿಗೆ ಧೈರ್ಯ ಹೇಳುವುದು ಯಾರು? ಒಂದು ವೇಳೆ ಕೋವಿಡ್‌ ಬಂದರೂ ಹೆದರಬೇಕಿಲ್ಲ. ಚಿಕಿತ್ಸೆಯಿಂದ ಸುಲಭವಾಗಿ ಗುಣವಾಗಬಹುದು.

–ಡಾ.ಉಮೇಶ ಜಾಧವ, ಸಂಸದ

ಸಮುದಾಯಕ್ಕೆ ಅಂಟದಂತೆ ತಡೆಯಿರಿ

ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿದೆ. ಜನ ಸಮುದಾಯಕ್ಕೆ ಅಂಟಿಕೊಳ್ಳುವ ಹಂತ ತಲುಪಿದೆ. ಲಾಕ್‌ಡೌನ್‌ನಿಂದ ಆರ್ಥಿಕ ಹೊರೆ ಆಗುತ್ತದೆ ನಿಜ; ಆದರೆ ಮುಂದೆ ಅದನ್ನು ಸರಿದೂಗಿಸಬಹುದು. ವಿದೇಶಗಳಲ್ಲೂ 15 ದಿನ ಲಾಕ್‌ಡೌನ್‌, 15 ದಿನ ತೆರವು ಹೀಗೆ ಅನುಸರಿಸುತ್ತಿದ್ದಾರೆ. ಜಿಲ್ಲೆಯಲ್ಲೂ ಈ ಕ್ರಮ ಅನುಸರಿಸಬೇಕು.

–ಶಶೀಲ್‌ ನಮೋಶಿ, ಬಿಜೆಪಿ ಮುಖಂಡ

ಜೀವ ಉಳಿದರೆ ಹಣ ಗಳಿಸಬಹುದು

ಆರ್ಥಿಕ ಹಿಂಜರಿತ ಎಂದು ರಾಜ್ಯ ಸರ್ಕಾರ ಲಾಕ್‌ಡೌನ್‌ ತೆರವು ಮಾಡಿದ್ದು ಸರಿಯಲ್ಲ. ಜನರೇ ಬಂದ್ ಮಾಡಿ ಎಂದು ಕೇಳುವಾಗ ಸರ್ಕಾರ ಏಕೆ ತೆರವುಗೊಳಿಸಿತು ತಿಳಿಯುತ್ತಿಲ್ಲ. ಜೀವ ಉಳಿದರೆ ಹಣವನ್ನು ಯಾವಾಗಲಾದರೂ ಗಳಿಸಬಹುದು. ಹಣದಿಂದ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಮತ್ತೆ ಅನಿರ್ದಿಷ್ಟ ಅವಧಿಯವರೆಗೆ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಬೇಕು.

–ಸುನಿತಾ ಅಂಬರಖೇಡ, ಶಿಕ್ಷಕಿ

ಅನಿವಾರ್ಯ ಸ್ಥಿತಿ ತಲುಪಿದ್ದೇವೆ

ನಗರದಲ್ಲಿ ಮನೆಯಿಂದ ಹೊರಗೆ ಕಾಲಿಡುವುದಕ್ಕೇ ಭಯವಾಗುತ್ತಿದೆ. ಮಾರುಕಟ್ಟೆಗಳತ್ತ ಇಣುಕಿದರೂ ಸಾಕು; ಆತಂಕ ಮೂಡುತ್ತದೆ. ವ್ಯಾಪಾರ– ವಹಿವಾಟಿನಲ್ಲಿ ಕನಿಷ್ಠ ಅಂತರ ಕಾಪಾಡಿಕೊಳ್ಳುವ ಅರಿವೂ ಜನರಿಗೆ ಇಲ್ಲ. ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ಬಳಸುತ್ತಿಲ್ಲ. ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ. 99 ಜನ ಸುರಕ್ಷತಾ ಕ್ರಮ ಅನುಸರಿಸಿ, ಒಬ್ಬರು ನಿರ್ಲಕ್ಷ್ಯ ಮಾಡಿದರೂ ಏನು ಪ್ರಯೋಜನವಿಲ್ಲ. ಇನ್ನೂ ಎರಡು ವಾರ ಲಾಕ್‌ಡೌನ್‌ ಮಾಡಿ, ಜನರ ಜೀವ ರಕ್ಷಿಸಿ.

–ಶ್ವೇತಾ ಸಿಂಗ್‌, ಸಾಮಾಜಿಕ ಹೋರಾಟಗಾರರು

‘ಜನತಾ ಕರ್ಫ್ಯೂ’ ರೀತಿ ಮಾಡಿ‌

ನಗರದಲ್ಲಿ ಈಗ ವ್ಯಾಪಾರವೇ ಆಗುತ್ತಿಲ್ಲ. ಆದರೂ ಜನಸಂದಣಿ ವಿಪರೀತವಾಗಿದೆ. ವ್ಯಾಪಾರ ಮಳಿಗೆಯಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ ಜನ ಕೇಳುವುದಿಲ್ಲ. ಹಾಕರ್ಸ್‌ಗಳಿಂದಾಗಿ ಹೆಚ್ಚು ಸಂದಣಿ ಉಂಟಾಗುತ್ತಿದೆ. ಕಳೆದ ಬಾರಿ ಮಾಡಿದಂತೆ ಕೇವಲ ವ್ಯಾಪಾರಕ್ಕೆ ಮಾತ್ರ ಲಾಕ್‌ಡೌನ್‌ ಜಾರಿಯಾದರೆ ಪ್ರಯೋಜನವಿಲ್ಲ. ಜನತಾ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಸೀಲ್‌ಡೌನ್ ಮಾಡಬೇಕು. ವ್ಯಾಪಾರ ಕುಸಿದರೂ ಚಿಂತೆಯಿಲ್ಲ. ಮೊದಲು ರೋಗದಿಂದ ಮುಕ್ತರಾಗಬೇಕಿದೆ.

–ಆನಂದ ದಂಡೋತಿ, ಜವಳಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.