ADVERTISEMENT

ಬೆಳಗಾವಿ: ತೆಂಗಿನಕಾಯಿ ನಂಬಿದವರ ಬದುಕು ಚೂರು

ಸಂಗ್ರಹಿಸಿದಲ್ಲೇ ಹಾಳಾಗುತ್ತಿರುವುದರಿಂದ ಅಪಾರ ನಷ್ಟ

ಎಂ.ಮಹೇಶ
Published 4 ಮೇ 2020, 1:20 IST
Last Updated 4 ಮೇ 2020, 1:20 IST
   

ಬೆಳಗಾವಿ: ಜಿಲ್ಲೆಯಲ್ಲಿ ತೆಂಗಿನಕಾಯಿ ಸಗಟು ಮಾರಾಟಗಾರರು ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾರಕ ಕೊರೊನಾ ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದರಿಂದಾಗಿ ಈ ಸಂದರ್ಭದಲ್ಲಿ ನಿಗದಿಯಾಗಿದ್ದ ಮದುವೆ ಮೊದಲಾದ ಸಮಾರಂಭಗಳು, ಜಾತ್ರೆ, ರಥೋತ್ಸವ ಮತ್ತಿತರ ಉತ್ಸವಗಳಿಗೆ ನಿರ್ಬಂಧ ಹೇರಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌, ಧಾಬಾಗಳು ಮುಚ್ಚಿವೆ. ಈಚೆಗೆ ಪಾರ್ಸಲ್‌ಗಷ್ಟೇ ಅವಕಾಶ ನೀಡಲಾಗಿದೆಯಾದರೂ ಎಲ್ಲ ಹೋಟೆಲ್‌ಗಳೂ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ತೆಂಗಿನ ಕಾಯಿಗಳಿಗೆ ಬೇಡಿಕೆ ಕುಸಿದಿದೆ. ಈ ನಡುವೆ ಮತ್ತೆರಡು ವಾರಗಳವರೆಗೆ ಲಾಕ್‌ಡೌನ್‌ ಮುಂದುವರಿದಿರುವುದು ವ್ಯಾಪಾರಿಗಳ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬೇಡಿಕೆ ಕುಸಿತ

ADVERTISEMENT

ದೇವಸ್ಥಾನಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳು ಬಂದ್‌ ಆಗಿವೆ. ಇದರಿಂದಾಗಿ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜಿಸುವಾಗ ತೆಂಗಿನಕಾಯಿ ಅರ್ಪಿಸುವುದು ಅಥವಾ ಹರಕೆ ತೀರಿಸುವುದಕ್ಕಾಗಿ ನೂರಾರು ತೆಂಗಿನ ಕಾಯಿಗಳನ್ನು ಒಡೆದು ಭಕ್ತಿ ಪ್ರದರ್ಶಿಸುವುದು ಕೂಡ ನಿಂತಿದೆ. ಪ್ರಸ್ತುತ ಮನೆಗಳಲ್ಲಷ್ಟೇ ತೆಂಗಿನ ಕಾಯಿಗಳನ್ನು ಅಡುಗೆ ಮೊದಲಾದವುಗಳಿಗೆ ಬಳಸಲಾಗುತ್ತಿದೆ. ಇತರ ಉದ್ದೇಶಗಳಿಗೆಂದು ತೆಂಗಿನ ಕಾಯಿಗಳಿಗೆ ಬೇಡಿಕೆ ಇಲ್ಲ. ಇದೆಲ್ಲದರ ಪರಿಣಾಮ ಅವು ಸಗಟು ವ್ಯಾಪಾರಿಗಳ ಬಳಿಯೇ ಉಳಿದಿವೆ. ಅವುಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಬಿಸಿಲಿನ ತಾಪವೂ ಹೆಚ್ಚಿರುವುದರಿಂದ ಇಟ್ಟಲ್ಲಿಯೇ ಒಡೆದು ಹೋಗುತ್ತಿವೆ. ಅವುಗಳನ್ನು ಹೆಚ್ಚಿನ ದಿನಗಳವರೆಗೆ ಇಟ್ಟುಕೊಳ್ಳುವುದಕ್ಕೆ ವ್ಯಾಪಾರಿಗಳು ಪರದಾಡುತ್ತಿದ್ದಾರೆ.

‘ಯುಗಾದಿ ಹಬ್ಬವಿದೆ. ಮದುವೆ, ಜಾತ್ರೆಯ ಸೀಸನ್ ಇದೆ. ಇದರಿಂದ ಹೆಚ್ಚಿನ ಬೇಡಿಕೆ ಬರುತ್ತದೆ’ ಎಂದು ಭಾವಿಸಿದ್ದ ವ್ಯಾಪಾರಿಗಳು ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ತೆಂಗಿನ ಕಾಯಿಗಳನ್ನು ಬೇರೆ ಬೇರೆ ಕಡೆಗಳಿಂದ ತರಿಸಿಕೊಂಡಿದ್ದರು. ಆದರೆ, ಅವುಗಳು ಮಾರಾಟವಾಗದೆ ಇರುವುದರಿಂದ ಕಂಗಾಲಾಗಿದ್ದಾರೆ.

ಗ್ರಾಹಕರಿಗೆ ಲಾಭ ಸಿಕ್ಕಿಲ್ಲ

ಬೇಡಿಕೆ ಕುಸಿದಿರುವುದರಿಂದ ಬೆಲೆಯೂ ಕಡಿಮೆಯಾಗಿದೆ. ಸಗಟು ವ್ಯಾಪಾರಿಗಳಿಂದ ಕಡಿಮೆ ಬೆಲೆಗೆ ಖರೀದಿಸುವ ಚಿಲ್ಲರೆ ವ್ಯಾಪಾರಿಗಳು ಕನಿಷ್ಠ ₹ 30ರಿಂದ ₹ 35ಕ್ಕೆ ಮಾರುತ್ತಿದ್ದಾರೆ. ಬೇಡಿಕೆ ಕುಸಿದಿದ್ದರೂ ಗ್ರಾಹಕರಿಗೆ ತಲುಪುವ ವೇಳೆಗೆ ಬೇಲೆಯೇನೂ ಕಡಿಮೆಯಾಗಿಲ್ಲ! ಪೂರೈಕೆದಾರರು, ಸಗಟು ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ನಷ್ಟವಾಗಿದೆ. ಕಿರಾಣಿ ಅಂಗಡಿಯವರಿಗೆ ಮಾತ್ರವೇ ಲಾಭವಾಗಿದೆ.

ರವಿವಾರ ಪೇಟೆ ಸೇರಿದಂತೆ ನಗರವೊಂದರಲ್ಲೇ 20ಕ್ಕೂ ಹೆಚ್ಚು ಮಂದಿ ಸಗಟು ವ್ಯಾಪಾರಿಗಳಿದ್ದಾರೆ. ಅವರು ಕುಮಟಾ, ಮಂಗಳೂರು, ಕುಂದಾಪುರ, ಕಡೂರು. ಬೀರೂರು, ಅರಸೀಕೆರೆ, ತುಮಕೂರು, ದಾವಣಗೆರೆ ಮೊದಲಾದ ಕಡೆಗಳಿಂದ ತೆಂಗಿನ ಕಾಯಿಗಳನ್ನು ತರಿಸಿದ್ದಾರೆ. ಸರಾಸರಿ ₹ 2ರಿಂದ ₹ 3 ಲಕ್ಷ ಮೌಲ್ಯದ ಸ್ಟಾಕ್‌ ಇಟ್ಟಿರುತ್ತಾರೆ. ದಿಢೀರನೆ ಬೇಡಿಕೆ ಪಾತಾಳಕ್ಕೆ ಇಳಿದಿದ್ದರಿಂದ ಅವರ ಲೆಕ್ಕಾಚಾರವೆಲ್ಲವೂ ತಲೆಕೆಳಕಾಗಿದೆ.

ಇಟ್ಟಲ್ಲೇ ಹಾಳಾಗುತ್ತಿವೆ

‘ನಾನು 80 ಚೀಲ ತೆಂಗಿನ ಕಾಯಿ ತರಿಸಿದ್ದೆ. ಆದರೆ, ಬೇಡಿಕೆ ಇಲ್ಲ. ಈ ನಡುವೆ 12ಕ್ಕೂ ಹೆಚ್ಚಿನ ಚೀಲಗಳಷ್ಟು ತೆಂಗಿನ ಕಾಯಿಗಳು ಹಾಳಾಗಿವೆ. ಬಿಸಿಲಿಗೆ ಒಡೆದು ನೀರು ಹರಿದು ಹೋದರೆ ಯಾರೂ ಖರೀದಿಸುವುದಿಲ್ಲ. ನಿತ್ಯವೂ 10ರಿಂದ 15 ಕಾಯಿಗಳು ಹಾಳಾಗುತ್ತಿವೆ. ಅದನ್ನು ನೋಡಿದರೆ ಕಣ್ಣೀರು ಬರುತ್ತದೆ. ಹೋಟೆಲ್‌ಗಳು ಚಾಲೂ ಆಗುವವರೆಗೆ ಸಂಕಷ್ಟ ತಪ್ಪಿದ್ದಲ್ಲ’ ಎಂದು ಸಗಟು ವ್ಯಾಪಾರಿ ಬಸವರಾಜ ಸೊಂಟನವರ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಲಾಕ್‌ಡೌನ್‌ನಿಂದ ಆದಾಗಿನಿಂದ ನಮಗೆ ಸಾವಿರಾರು ರೂಪಾಯಿ ನಷ್ಟವಾಗಿದೆ. ಹಾಳಾದ ಕಾಯಿಗಳನ್ನು ಸಣ್ಣದಾಗಿ ಕತ್ತರಿಸಿ ಬಿಸಿಲಿನಲ್ಲಿಟ್ಟು ಒಣಗಿಸುತ್ತಿದ್ದೇವೆ. ಎಣ್ಣೆಯನ್ನಾದರೂ ಮಾಡಿಸೋಣ ಎಂದು ಪ್ರಯತ್ನಿಸುತ್ತಿದ್ದೇವೆ. ದೊಡ್ಡ ಪ್ರಮಾಣದಲ್ಲಿ ತರಿಸಿದ್ದವರಿಗೆ ಇನ್ನೂ ಹೆಚ್ಚಿನ ನಷ್ಟವಾಗಿದೆ. ಕಾಯಿಗಳು ಬೂಸ್ಟ್‌ ಹಿಡಿದು ಹಾಳಾಗುತ್ತಿವೆ. ಸರ್ಕಾರ ನಮ್ಮಂತಹ ವ್ಯಾಪಾರಿಗಳ ಬಗ್ಗೆಯೂ ಗಮನಹರಿಸಬೇಕು. ಪರಿಹಾರ ಕಲ್ಪಿಸಬೇಕು’ ಎನ್ನುವುದು ಅವರ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.