ADVERTISEMENT

ಕೋವಿಡ್‌ ಸೋಂಕು ದೃಢ ಪ್ರಮಾಣ ಶೇ 5ಕ್ಕೆ ಇಳಿದರೆ ಲಾಕ್‌ಡೌನ್‌ ಸಡಿಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 22:53 IST
Last Updated 5 ಜೂನ್ 2021, 22:53 IST
 ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ‘ಕೋವಿಡ್‌ ಸೋಂಕು ದೃಢ ಪ್ರಮಾಣ ಶೇ 5ಕ್ಕೆ ಇಳಿಕೆಯಾಗುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ಅಧಿಕಾರಿಗಳು ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಸದ್ಯ ರಾಜ್ಯದಲ್ಲಿ ಜೂನ್ 14ರವರೆಗೆ ಲಾಕ್‌ಡೌನ್‌ ವಿಧಿಸಲಾಗಿದೆ. ಕೋವಿಡ್‌ ದೃಢಪ್ರಮಾಣ ಕಡಿಮೆಯಾಗುತ್ತಿರುವ ಜಿಲ್ಲೆಗಳಿಗೆ ಲಾಕ್‌ಡೌನ್‌ನಿಂದ ಯಾವ ಯಾವ ರೀತಿಯಲ್ಲಿ ವಿನಾಯಿತಿ ನೀಡಬಹುದು ಎಂಬ ಬಗ್ಗೆ ಸದ್ಯವೇ ನಿರ್ಧರಿಸಲಾಗುವುದು’ ಎಂದರು.

ರಾಜ್ಯದಲ್ಲಿ ಕೆಲವು ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವ ಮಹಾರಾಷ್ಟ್ರದಲ್ಲಿ ಐದು ಹಂತಗಳಲ್ಲಿ ಲಾಕ್‌ಡೌನ್‌ ಸಡಿಲಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಜ್ಯದಲ್ಲೂ ನಿರ್ಬಂಧಗಳನ್ನು ಸಡಿಲಿಸುವ ಸುಳಿವು ನೀಡಿದರು.

ADVERTISEMENT

ಶೇ 10ಕ್ಕಿಂತ ಕಡಿಮೆ: ರಾಜ್ಯದಲ್ಲಿ ಒಂದೇ ಸಮನೆ ಏರಿಕೆ ಕಂಡು ಶೇ 50ರ ಗಡಿ ಮುಟ್ಟಿದ್ದ ಕೋವಿಡ್ ದೃಢ ಪ್ರಮಾಣ ದರ ಶನಿವಾರ ಶೇ 9.69ಕ್ಕೆ ಇಳಿದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ‘ಏಪ್ರಿಲ್ 15ರಿಂದೀಚೆಗೆ ಇದೇ ಮೊದಲ ಬಾರಿಗೆ ಕೋವಿಡ್‌ ದೃಢ ಪ್ರಮಾಣ ಶೇ 10ಕ್ಕಿಂತ ಕಡಿಮೆಯಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.