ADVERTISEMENT

ಲಾಕ್‌ಡೌನ್ ಯಶಸ್ವಿಗೆ ಪೊಲೀಸರೊಂದಿಗೆ ಕೈ ಜೋಡಿಸಿ ಮಾದರಿಯಾದ ಕಲಬುರ್ಗಿಯ ಜನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 8:46 IST
Last Updated 27 ಮಾರ್ಚ್ 2020, 8:46 IST
ಕಲಬುರ್ಗಿಯಲ್ಲಿ ಜನತಾ ಜವಾಬ್ದಾರಿ ಅಭಿಯಾನ ಆರಂಭಿಸಿದ ನಾಗರಿಕರು ಮಳಿಗೆಗಳ ಮುಂದೆ, ಮನೆಗಳ ಮುಂದೆ ಸುರಕ್ಷತಾ ಅಂತರದ ಮಾರ್ಕಿಂಗ್ ಮಾಡಿದರು.
ಕಲಬುರ್ಗಿಯಲ್ಲಿ ಜನತಾ ಜವಾಬ್ದಾರಿ ಅಭಿಯಾನ ಆರಂಭಿಸಿದ ನಾಗರಿಕರು ಮಳಿಗೆಗಳ ಮುಂದೆ, ಮನೆಗಳ ಮುಂದೆ ಸುರಕ್ಷತಾ ಅಂತರದ ಮಾರ್ಕಿಂಗ್ ಮಾಡಿದರು.   

ಕಲಬುರ್ಗಿ: ಕೊರೊನಾ ವೈರಾಣು ಅಟ್ಟಹಾಸ ತಡೆಗೆ ಇಲ್ಲಿನ ವೆಂಕಟೇಶ್ವರ ನಗರದ ನಿವಾಸಿಗಳು 'ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ' ಅಭಿಯಾನ ಆರಂಭಿಸಿದ್ದಾರೆ. ಪ್ರತಿಯೂಂದು ಮನೆಯ ಒಬ್ಬೊಬ್ಬರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡು ಸಾಮಾಜಿಕ ಸುರಕ್ಷತಾ ಅಂತರ ಕಾಪಾಡಲು ಮುಂದಾಗಿದ್ದಾರೆ.

ಈ ಬಡಾವಣೆಯಲ್ಲಿ ಇರುವ ಎಲ್ಲ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸುರಕ್ಷತಾ ಮಾರ್ಕಿಂಗ್ ಮಾಡಿದ್ದಾರೆ. ಮನೆಮನೆಗೆ ತೆರಳಿ ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸಿದ್ದಾರೆ. ಸ್ವಚ್ಛತೆ ಕಾಪಾಡುವಂತೆ ಕೋರುತ್ತಿದ್ದಾರೆ. ಬಡಾವಣೆಯ ಮುಖ್ಯ ರಸ್ತೆಗಳಲ್ಲಿ ಪಾಳಿ ಪ್ರಕಾರ ಕಾವಲು ನಿಂತು 'ಬಿಗಿ ಬಂದೋಬಸ್ತ್' ಕೈಗೊಂಡಿದ್ದಾರೆ. ಮಾಸ್ಕ್ ಧರಿಸದವರು ಬಡಾವಣೆ ಪ್ರವೇಶಿಸದಂತೆ ತಡೆದು, ಮಾಸ್ಕ್ ಧರಿಸಲು ತಿಳಿಸುತ್ತಿದ್ದಾರೆ.

ಸಿಲಿಂಡರ್, ನೀರು, ತರಕಾರಿ, ಹಣ್ಣು ಮಾರಾಟಗಾರರಿಗೆ ಕಡ್ಡಾಯವಾಗಿ ಕೈಗವಸು, ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದಾರೆ. ಸ್ಥಳೀಯ ನಿವಾಸಿ ಹುಲಿಗೆಪ್ಪ ಕನಕಗಿರಿ ಮಾತನಾಡಿ, 'ಎಲ್ಲವನ್ನೂ ಸರ್ಕಾರವೇ ಮಾಡಬೇಕು. ಪೊಲೀಸರು, ವೈದ್ಯರೇ ಮಾಡಬೇಕು ಎಂದರೆ ಆಗದು. ಸಾಂಕ್ರಾಮಿಕ ರೋಗ ಹರಡಬಹುದಾದ ಈ ತುರ್ತು ಪರಿಸ್ಥಿತಿಯಲ್ಲಿ ನಾವೂ ಎಚ್ಚೆತ್ತುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ' ಎಂದರು.

ADVERTISEMENT

ಮಹೇಶ ದೇಶಪಾಂಡೆ, ಸಂಜಯ, ಪಾಂಡುರಂಗ, ಸತೀಶ್, ಆನಂದ, ರಾಘವೇಂದ್ರ ದೇಶಮುಖ, ನಾಗೇಶ್, ಸಂತೋಷ ಕುಲಕರ್ಣಿ, ಪ್ರಮೋದ್ ಷಹಾ, ಶುಭಂ ದೇಶಮುಖ, ಕಸ್ತೂರಚಂದ್ ಕಾಸರ್ ಇದ್ದರು. ಈ ಕ್ರಮಕ್ಕೆ ಬಡಾವಣೆಯ ಎಲ್ಲ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.