ADVERTISEMENT

ಲೋಕಾಯುಕ್ತ ಆಸ್ತಿ: ಕಾಯ್ದೆ ತಿದ್ದುಪಡಿ ಅವಶ್ಯ; ರಮೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 15:48 IST
Last Updated 9 ನವೆಂಬರ್ 2025, 15:48 IST
ರಮೇಶ್ ಬಾಬು
ರಮೇಶ್ ಬಾಬು   

ಬೆಂಗಳೂರು: ‘ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳು ಮತ್ತು ಸರ್ಕಾರಿ ನೌಕರರು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸುವುದಕ್ಕೆ ಅವಕಾಶ ಕಲ್ಪಿಸಲು ಲೋಕಾಯುಕ್ತ ಕಾಯ್ದೆ ತಿದ್ದುಪಡಿಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಈ ಬಗ್ಗೆ ಕಾನೂನು ಸಚಿವ ಎಚ್‌.ಕೆ. ಪಾಟೀಲ ಅವರಿಗೆ ಪತ್ರ ಬರೆದಿರುವ ಅವರು, ‘ಪಾರದರ್ಶಕ ಆಡಳಿತ ಉದ್ದೇಶದಿಂದ ಪ್ರತಿ ವರ್ಷ ಲೋಕಾಯುಕ್ತರು, ಉಪ ಲೋಕಾಯುಕ್ತರು ಮತ್ತು ನೌಕರರು ತಮ್ಮ ಆಸ್ತಿಗಳನ್ನು ಬಹಿರಂಗಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಮನವಿ ಮಾಡಿದ್ದಾರೆ.

‘ಲೋಕಾಯುಕ್ತ ಕಾಯ್ದೆಯ ಅನ್ವಯ ವಿಧಾನ ಮಂಡಲದ ಸದಸ್ಯರು ಪ್ರತಿವರ್ಷ ತಮ್ಮ ಆಸ್ತಿಯ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಿದೆ. ಆಸ್ತಿ ವಿವರಗಳನ್ನು ಜೂನ್ 30ರ ಒಳಗೆ ಸಲ್ಲಿಸದ ಶಾಸಕರ ಪಟ್ಟಿಯನ್ನು ಲೋಕಾಯುಕ್ತ ಕಾಯ್ದೆ ಅನ್ವಯ ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಇದು ಅವಶ್ಯ. ಲೋಕಾಯುಕ್ತ ಸಂಸ್ಥೆಯಲ್ಲಿ ಇರುವವವರೂ ತಮ್ಮ ಆಸ್ತಿ ಪಟ್ಟಿಯನ್ನು ಪ್ರಕಟಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅವಶ್ಯ‌’ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

‘ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ತಮ್ಮ ಆಸ್ತಿ ಬಹಿರಂಗಪಡಿಸಲು ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಮಾಡಬೇಕೆಂದು 2021 ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ನನ್ನ ಪತ್ರಕ್ಕೆ ಅಭಿಪ್ರಾಯ ನೀಡುವಂತೆ ಲೋಕಾಯುಕ್ತ ನಿಬಂಧಕರಿಗೆ ಸರ್ಕಾರ ಪತ್ರ ಬರೆದಿದ್ದರೂ, ಲೋಕಾಯುಕ್ತದಿಂದ ಯಾವುದೇ ಮಾಹಿತಿ ನೀಡಿಲ್ಲ. ಲೋಕಾಯುಕ್ತ ಸಂಸ್ಥೆಯು 2017-18ರಿಂದ 2021-22ವರೆಗಿನ ವಾರ್ಷಿಕ ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸದಿರುವುದು ವಿಧಾನಪರಿಷತ್ತಿನ ವರದಿಯಿಂದ ಗೊತ್ತಾಗುತ್ತದೆ. ಲೋಕಾಯುಕ್ತವು ವಾರ್ಷಿಕ ವರದಿಯನ್ನು ಅನುಮೋದನೆಗಾಗಿ ನಿಯಮಾನುಸಾರ ವಿಧಾನಮಂಡಲದಲ್ಲಿ ಮಂಡಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.