ಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಬೆಂಗಳೂರು: ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಬಿಡುವಿನ ಸಮಯದಲ್ಲಿ ‘ಕಣಿ’ ಹೇಳಿ, ಎಷ್ಟು ದುಡಿಯಬಹುದು? ‘ನಾನು ಕಣಿ ಹೇಳಿ ₹5 ಲಕ್ಷ ದುಡಿದಿದ್ದೇನೆ ಅಷ್ಟೇ’ ಎಂದು ನ್ಯಾಯಾಲಯಕ್ಕೆ ಪದೇ–ಪದೇ ಪ್ರಮಾಣಪತ್ರ ಸಲ್ಲಿಸಿದ್ದ ಅಬಕಾರಿ ಇನ್‌ಸ್ಪೆಕ್ಟರ್ ಒಬ್ಬರು ಈಗ ಜೈಲು ಪಾಲಾಗಿದ್ದಾರೆ.
ಬೆಂಗಳೂರು ದಕ್ಷಿಣ ವಲಯದ ಅಬಕಾರಿ ಇನ್‌ಸ್ಪೆಕ್ಟರ್ ಆಗಿದ್ದ ಕೆ.ಕೃಷ್ಣಮೂರ್ತಿ ಎಂಬುವವರಿಗೆ 2013ರ ಆಗಸ್ಟ್‌ನ ಒಂದು ಮುಂಜಾನೆ ಎಂದಿನಂತೆ ಇರಲಿಲ್ಲ. ಬೆಳಗ್ಗೆ ಬೆಳಕು ಹರಿಯುವ ಮುನ್ನವೇ ಲೋಕಾಯುಕ್ತ ಪೊಲೀಸರು ಅವರ ಮನೆಯ ಬಾಗಿಲು ಬಡಿದಿದ್ದರು. ಮನೆಯನ್ನು ಜಾಲಾಡಿ ಅಲ್ಲಿ ದೊರೆತ ನಗದು, ಆಸ್ತಿ ಪತ್ರಗಳು, ಬ್ಯಾಂಕ್ ಠೇವಣಿ ಪತ್ರಗಳು ಮತ್ತು ಚಿನ್ನ–ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದರು.
ಶೋಧದ ವೇಳೆ ಕೃಷ್ಣಮೂರ್ತಿ ಅವರ ಮನೆಯಲ್ಲಿ ಕೆಲವು ತಾಳೆಗರಿಗಳು, ಗಿಡಮೂಲಿಕೆಗಳೂ ದೊರೆತಿದ್ದವು. ಲೋಕಾಯುಕ್ತ ಪೊಲೀಸರು ಅವನ್ನೂ ಮಹಜರು ಮಾಡಿದ್ದರು. ಆಸ್ತಿ, ಬ್ಯಾಂಕ್ ಠೇವಣಿ, ನಗದು, ಚಿನ್ನ–ಬೆಳ್ಳಿಯ ಆಭರಣಗಳ ಮೌಲ್ಯವನ್ನು ತನಿಖಾಧಿಕಾರಿಗಳು ಲೆಕ್ಕಾಚಾರ ಮಾಡಿದಾಗ, ಕೃಷ್ಣಮೂರ್ತಿ ಅವರ ಒಟ್ಟು ಆಸ್ತಿ ₹72.54 ಲಕ್ಷ ಎಂಬುದು ಗೊತ್ತಾಯಿತು.
1990 ರಿಂದ 2013ರ ನಡುವೆ ಎಲ್ಲ ಘೋಷಿತ ಮೂಲಗಳಿಂದ ಕೃಷ್ಣಮೂರ್ತಿ ಅವರು ಸಂಪಾದಿಸಿದ್ದದ್ದು ₹42.55 ಲಕ್ಷ ಮಾತ್ರ. ಅದಕ್ಕಿಂತ ಹೆಚ್ಚುವರಿ ₹29.98 ಲಕ್ಷ ಆಸ್ತಿಯನ್ನು ಅವರು ಹೊಂದಿದ್ದರು. ಲೋಕಾಯುಕ್ತ ಪೊಲೀಸರು ಅವರ ವಿರುದ್ಧ, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣ ದಾಖಲಿಸಿದರು. ಲೋಕಾಯುಕ್ತ ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಂಡಿತ್ತು.
ಗಿಡಮೂಲಿಕೆ, ತಾಳೆಗರಿ, ಕವಡೆಗಳ ಬಗ್ಗೆ ನ್ಯಾಯಾಲಯದಲ್ಲಿ ಕೇಳಿದ ಪ್ರಶ್ನೆಗೆ ಕೃಷ್ಣಮೂರ್ತಿ, ‘ನಾವು ಕಣಿ ಹೇಳುವ ಸಮುದಾಯದವರು. ನಾನೂ ಕಣಿ ಹೇಳುತ್ತೇನೆ. ಜತೆಗೆ ನಾಟಿ ಮದ್ದೂ ನೀಡುತ್ತೇನೆ. ಅದಕ್ಕೆ ಯಾವುದೇ ಶುಲ್ಕ ಪಡೆಯುವಂತಿಲ್ಲ. ಹಣ ಕೇಳಿ ಪಡೆದರೆ ನಮ್ಮ ವಿದ್ಯೆಯೇ ನಾಶವಾಗುತ್ತದೆ. ದಕ್ಷಿಣೆ ರೂಪದಲ್ಲಿ ಬಂದ ಹಣ ಇರಿಸಿಕೊಳ್ಳಬಹುದು’ ಎಂದು ಉತ್ತರಿಸಿದ್ದರು.
ವಿಚಾರಣೆ ವರ್ಷಗಳ ಕಾಲ ನಡೆಯಿತು. ಘೋಷಿತ ಆದಾಯಕ್ಕಿಂತ ಶೇ 70ರಷ್ಟು ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ವಿಚಾರಣೆ ವೇಳೆ ವಕೀಲರು ಪ್ರಶ್ನಿಸಿದಾಗ ಕೃಷ್ಣಮೂರ್ತಿ, ‘ಕಣಿ ಹೇಳಿ ₹5 ಲಕ್ಷ ಸಂಪಾದಿಸಿದ್ದೇನೆ. ನಾಟಿ ಮದ್ದು ನೀಡಿ ₹3 ಲಕ್ಷ ದುಡಿದಿದ್ದೇನೆ’ ಎಂದಿದ್ದರು. ಈ ಬಗ್ಗೆ ಪ್ರಮಾಣಪತ್ರವನ್ನೂ ಸಲ್ಲಿಸಿದ್ದರು.
ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ‘ಕಣಿ ಹೇಳಿ ಹಣ ಪಡೆದುಕೊಳ್ಳುವುದಿಲ್ಲ ಎಂದು ಮೊದಲು ಹೇಳಿದ್ದಿರಿ. ಈಗ ನೋಡಿದರೆ ಕಣಿ ಹೇಳಿ ₹5 ಲಕ್ಷ ಸಂಪಾದಿಸಿದ್ದೇನೆ ಎನ್ನುತ್ತಿದ್ದೀರಿ. ಕುಲಕಸುಬಿಗೆ ಮೋಸ ಮಾಡಿದ್ದೀರಾ’ ಎಂದು ಪ್ರಶ್ನಿಸಿದ್ದರು.
ಕಣಿ ಮತ್ತು ನಾಟಿಮದ್ದಿನ ವಿಚಾರದಲ್ಲಿ ಕೃಷ್ಣಮೂರ್ತಿ ಅವರ ಎಲ್ಲ ವಿವರಣೆಯನ್ನು ತಿರಸ್ಕರಿಸಿದ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಪ್ರಕರಣಗಳ (ಲೋಕಾಯುಕ್ತ) ನ್ಯಾಯಾಧೀಶರು, 3 ವರ್ಷ ಜೈಲು ಶಿಕ್ಷೆ ವಿಧಿಸಿದರು. ಜತೆಗೆ ₹30 ಲಕ್ಷ ದಂಡ ಕಟ್ಟುವಂತೆಯೂ ಸೂಚಿಸಿದರು. ನ್ಯಾಯಾಲಯಕ್ಕೆ ಕಣಿಯ ಕತೆ ಹೇಳಿದ್ದ ಕೃಷ್ಣಮೂರ್ತಿ ಈಗ ಜೈಲುಪಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.