ಬೆಂಗಳೂರು: ಅಬಕಾರಿ ಇಲಾಖೆಯ ಮೂರು ಜಿಲ್ಲಾ ಕಚೇರಿಗಳ ಸಿಬ್ಬಂದಿಯನ್ನು ಬುಧವಾರ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು, ಕರ್ತವ್ಯಲೋಪ ಎಸಗದಂತೆ ಎಚ್ಚರಿಕೆ ನೀಡಿದರು.
ಮದ್ಯ ಮಾರಾಟ ಪರವಾನಗಿ ನೀಡುವಲ್ಲಿ ಲಂಚಕ್ಕೆ ಬೇಡಿಕೆ ಮತ್ತು ವಿಳಂಬ ಸಂಬಂಧ ಬಂದಿದ್ದ ದೂರುಗಳ ಆಧಾರದಲ್ಲಿ ಲೋಕಾಯುಕ್ತರು, ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ, ಬಿ.ವೀರಪ್ಪ ಮತ್ತು ಲೋಕಾಯುಕ್ತ ಪೊಲೀಸರು 2024ರ ಸೆಪ್ಟೆಂಬರ್ 24ರಂದು ಅಬಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.
ದಾಳಿ ನಡೆದ ಸಂದರ್ಭದಲ್ಲಿ ಅಬಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಮಾಹಿತಿ ನಮೂದಿಸದೆಯೇ ಕಚೇರಿಯಿಂದ ಹೊರಹೋಗಿದ್ದು, ಹಾಜರಾತಿ ಮತ್ತು ನಗದು ವಹಿ ನಿರ್ವಹಣೆ ಮಾಡದೇ ಇದ್ದದ್ದು ಹಾಗೂ ಕಚೇರಿಯಲ್ಲಿ ಮದ್ಯ ಕುಡಿದಿದ್ದು ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತರು 2025ರ ಮಾರ್ಚ್ 29ರಂದು ವಿಚಾರಣೆ ನಡೆಸಿದ್ದರು.
ಬುಧವಾರ ಎರಡನೇ ಹಂತದಲ್ಲಿ ಬೆಂಗಳೂರು ಅಬಕಾರಿ ಜಿಲ್ಲೆ 5, 6 ಮತ್ತು 8ರ ಪ್ರಕರಣಗಳ ವಿಚಾರಣೆ ನಡೆಸಿದರು. ‘ದಾಳಿಯ ವೇಳೆ ಪತ್ತೆಯಾಗಿದ್ದ ನ್ಯೂನತೆಗಳನ್ನು ಸರಿಪಡಿಸಿದ್ದೇವೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಲೋಕಾಯುಕ್ತರಿಗೆ ವರದಿ ಸಲ್ಲಿಸಿದರು. ವರದಿಗಳನ್ನು ಪರಿಶೀಲಿಸಿ, ಅವುಗಳಲ್ಲಿ ಸಮಂಜಸ ಎನಿಸಿದ ವಿವರಣೆ ನೀಡಿದ್ದ ಅಧಿಕಾರಿಗಳ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲಾಯಿತು ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
2024–25ನೇ ಸಾಲಿನಲ್ಲಿ ನೂತನ ಸನ್ನದು, ಸನ್ನದು ನವೀಕರಣ, ಹೆಸರು ಬದಲಾವಣೆ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ಅವುಗಳ ಸ್ಥಿತಿಗತಿಯ ಮಾಹಿತಿ ಇರುವ ವರದಿಯನ್ನು ಜೂನ್ 24ರಂದು ಸಲ್ಲಿಸಿ ಎಂದು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.