ಎನ್. ಎಂ. ಜಗದೀಶ್ ಅವರಿಗೆ ಸೇರಿದ ತೋಟದ ಮನೆ
ಬೆಂಗಳೂರು: ಇಬ್ಬರು ನಿವೃತ್ತರು ಮತ್ತು ಒಂಬತ್ತು ಅಧಿಕಾರಿಗಳಿಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಗುರುವಾರ ಏಕಕಾಲಕ್ಕೆ ದಾಳಿಮಾಡಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ₹47.58 ಕೋಟಿ ಅಕ್ರಮ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಣ್ಣ ನೀರಾವರಿ ಇಲಾಖೆ ನಿವೃತ್ತ ಮುಖ್ಯ ಎಂಜಿನಿಯರ್ ಎಂ. ರವೀಂದ್ರ ಹಾಗೂ ಮಂಡ್ಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್. ಶಿವರಾಜು ಮೇಲೆ ನಿವೃತ್ತಿ ಬಳಿಕವೂ ದಾಳಿ ನಡೆದಿದೆ.
ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕೆ.ಜಿ. ಜಗದೀಶ್, ಹಾರೋಹಳ್ಳಿ ತಹಶೀಲ್ದಾರ್ ವಿಜಯಣ್ಣ, ಕಬಿನಿ ಜಲಾಶಯದ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ. ಮಹೇಶ್, ಬಿಬಿಎಂಪಿ ಕಂದಾಯ ಅಧಿಕಾರಿ ಬಸವರಾಜ ಮಗ್ಗಿ, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ ದಾಳಿಗೊಳಗಾದ ಪ್ರಮುಖ ಅಧಿಕಾರಿಗಳು.
ದಾವಣಗೆರೆಯ ಕೆಪಿಟಿಸಿಎಲ್ ಜಾಗೃತ ದಳದ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್. ಉಮೇಶ್ ಬಳಿ ತಲಾ ನಾಲ್ಕು ಮನೆ ಮತ್ತು ನಿವೇಶನಗಳಿವೆ. ಅಲ್ಲಿಯೇ ಬೆಸ್ಕಾಂ ಜಾಗೃತ ದಳದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯಲ್ಲಿರುವ ಎಂ.ಎಸ್. ಪ್ರಭಾಕರ್ ಮನೆಯಲ್ಲಿ ₹3 ಲಕ್ಷ ನಗದು ಪತ್ತೆಯಾಗಿದೆ. ತಲಾ ಎರಡು ಮನೆ, ನಿವೇಶನಗಳೂ ಇವೆ.
ರವೀಂದ್ರ ಬಳಿ 49 ಎಕರೆ 16 ಗುಂಟೆ ಕೃಷಿ ಜಮೀನು, ಆರು ಮನೆ, ನಾಲ್ಕು ನಿವೇಶನಗಳಿರುವುದು ಪತ್ತೆಯಾಗಿದೆ. ₹1 ಕೋಟಿ ಮೌಲ್ಯದ ಚಿನ್ನಾಭರಣಗಳೂ ಇವೆ. ಕೆ.ಜಿ. ಜಗದೀಶ್ ಏಳು ಮನೆಗಳು, ಐದು ನಿವೇಶನಗಳು, 36 ಎಕರೆ 20 ಗುಂಟೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ.
ಶಿವರಾಜು ಬಳಿ ತಲಾ ಮೂರು ನಿವೇಶನ, ಮನೆ, 10 ಎಕರೆ ಕೃಷಿ ಜಮೀನಿನ ಜತೆ ಕ್ರಷರ್ ಉದ್ಯಮ ಇರುವುದನ್ನೂ ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ. ಮನೆಯಲ್ಲಿ ₹6 ಲಕ್ಷ ನಗದು ಸಿಕ್ಕಿದೆ.
ತಹಶೀಲ್ದಾರ್ ವಿಜಯಣ್ಣ ಬಳಿ ಒಂಬತ್ತು ಮನೆಗಳಿದ್ದರೆ, 13 ಎಕರೆ ಕೃಷಿ ಜಮೀನೂ ಇದೆ. ಮನೆಯಲ್ಲಿ ₹2.42 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಮಹೇಶ್ ಬಳಿ 11 ಎಕರೆ 20 ಗುಂಟೆ ಜಮೀನು ಮತ್ತು ತಲಾ ಮೂರು ಮನೆ, ನಿವೇಶನ ಪತ್ತೆಯಾಗಿದೆ.
ಬೆಳಗಾವಿಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದುರದುಂಡೇಶ್ವರ ಎಂ. ಬನ್ನೂರು ಬಳಿ ಮೂರು ಮನೆಗಳಿವೆ. ಮನೆಯಲ್ಲಿ ₹1.84 ಲಕ್ಷ ನಗದು ಸಿಕ್ಕಿದೆ.
ಎಲ್ಲ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 100 ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಬೆಂಗಳೂರಿನ ದಾಸನಪುರ ಗ್ರಾಮ ಪಂಚಾಯಿತಿಯ ಗ್ರೇಡ್–1 ಕಾರ್ಯದರ್ಶಿ ಎನ್.ಎಂ. ಜಗದೀಶ್ ಅವರ ಮನೆಯಲ್ಲಿ ₹28 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಮೂರು ವಾಸದ ಮನೆ ಕೃಷಿ ಜಮೀನುಗಳೂ ಇರುವುದು ಪತ್ತೆಯಾಗಿದೆ. ಶೇಖರ್‌ಗೌಡ 83 ಎಕರೆ ಜಮೀನು ಒಡೆಯ ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ ಬಳಿ ₹7.88 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇವರು ಬರೋಬ್ಬರಿ 83 ಎಕರೆ ಜಮೀನಿನ ಒಡೆಯ. ಐದು ನಿವೇಶನ ನಾಲ್ಕು ಮನೆಗಳೂ ಇವೆ.
ಕಲಬುರಗಿ: ಬಿಬಿಎಂಪಿ ಮಹದೇವಪುರ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಗ್ಗಿ ಅವರಿಗೆ ಸೇರಿದ ಇಲ್ಲಿನ ಎಂ.ಬಿ. ನಗರದ ಮನೆಯಲ್ಲಿ 583 ಕ್ಯಾಸಿನೊ ಕಾಯಿನ್‌ಗಳು ಹಾಗೂ ಗೋವಾದ ‘ಕ್ಲಬ್ ಡೆಲ್ಟಿನ್’ ಹೆಸರಿನ ಕ್ಯಾಸಿನೊ ಸದಸ್ಯತ್ವ ಕಾರ್ಡ್ ಪತ್ತೆಯಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಕೊನೆಯ ಮನೆಯ ತಪಾಸಣೆ ವೇಳೆ ಎರಡು ಸೂಟ್‌ಕೇಸ್‌ಗಳಲ್ಲಿ 583 ಕ್ಯಾಸಿನೊ ಕಾಯಿನ್‌ಗಳು ಸಿಕ್ಕಿದ್ದು ಒಂದೊಂದು ಕಾಯಿನ್‌ಗಳ ಮೌಲ್ಯ ₹50 ಸಾವಿರದಿಂದ ₹1 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಬಸವರಾಜ ಅವರು ಆಗಾಗ ಗೋವಾಕ್ಕೆ ತೆರಳಿ ಕ್ಯಾಸಿನೊದಲ್ಲಿ ಆಡುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಮಗ್ಗಿ 15 ನಿವೇಶನ 32 ಎಕರೆ ಜಮೀನು ಹೊಂದಿದ್ದು ಎರಡು ಮನೆಗಳೂ ಇವೆ. ಮನೆಯಲ್ಲಿ ₹2.32 ಲಕ್ಷ ನಗದು ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.