ADVERTISEMENT

ದುರಾಡಳಿತ: ಲೋಕಾಯುಕ್ತ ವಿಚಾರಣೆ

ಕಂದಾಯ ಇಲಾಖೆಗಳಲ್ಲಿ ಕಡತ ವಿಲೇವಾರಿ ವಿಳಂಬ l ಸ್ವಯಂಪ್ರೇರಿತ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 21:07 IST
Last Updated 21 ಅಕ್ಟೋಬರ್ 2022, 21:07 IST
   

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಕಚೇರಿಗಳಲ್ಲಿನ ದುರಾಡಳಿತ, ಕಡತ ವಿಲೇವಾರಿಯಲ್ಲಿನ ವಿಳಂಬ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ವಿಚಾರಣೆ ಆರಂಭಿಸಿದ್ದಾರೆ.

ಲೋಕಾಯುಕ್ತ ಪೊಲೀಸ್‌ ಮತ್ತು ನ್ಯಾಯಾಂಗ ವಿಭಾಗಗಳ ಅಧಿಕಾರಿಗಳ ಜಂಟಿ ತಂಡಗಳು ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ಮತ್ತು ಉತ್ತರ ಉಪ ವಿಭಾಗಾಧಿಕಾರಿಗಳ ಕಚೇರಿಗಳು, ಉತ್ತರ, ದಕ್ಷಿಣ, ಪೂರ್ವ, ಯಲಹಂಕ ಮತ್ತು ಆನೇಕಲ್‌ ತಾಲ್ಲೂಕು ಕಚೇರಿಗಳಲ್ಲಿ ಸೆಪ್ಟೆಂಬರ್‌ 27ರಂದು ದಿಢೀರ್‌ ತಪಾಸಣೆ ಮಾಡಿದ್ದವು. ತನಿಖಾಧಿಕಾರಿಗಳು ಸಲ್ಲಿಸಿದ್ದ ವರದಿ ಆಧರಿಸಿ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳು ಮತ್ತು ಐವರು ತಹಶೀಲ್ದಾರ್‌ಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ. ತಪಾಸಣೆ ವೇಳೆ ಕಂಡುಬಂದಿರುವ ಲೋಪಗಳು ಹಾಗೂ ದುರಾಡಳಿತಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 21ರೊಳಗೆ ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ.

ADVERTISEMENT

ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುತಿನ ಚೀಟಿ ಧರಿಸದೇ ಇರುವುದು, ಮೇಜುಗಳ ಮೇಲೆ ಹೆಸರು ಮತ್ತು ಹುದ್ದೆಯ ಫಲಕ ಪ್ರದರ್ಶಿಸದೇ ಇರುವುದು, ಹಾಜರಾತಿ ವಹಿಗೆ ಸಹಿ ಮಾಡದಿರುವುದು, ನಗದು ಘೋಷಣೆ ಮಾಡದಿರುವುದು, ಸರ್ಕಾರದ ಕಡತಗಳ ನಿರ್ವಹಣೆಯಲ್ಲಿ ಲೋಪ ಎಸಗಿರುವುದು ಕಂಡುಬಂದಿದೆ ಎಂದು ತನಿಖಾ ತಂಡಗಳು ವರದಿ ನೀಡಿವೆ.

ಪ್ರಕರಣ ಬಾಕಿ: ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಅತಿ ಹೆಚ್ಚಿನ ಪ್ರಕರಣ ಗಳು ವಿಲೇವಾರಿಗೆ ಬಾಕಿ ಇರುವುದು, ವಿಚಾರಣೆ ಪೂರ್ಣಗೊಳಿಸಿದ್ದರೂ ಆದೇಶ ಹೊರಡಿಸಲು ಬಾಕಿ ಇರಿಸಿಕೊಂಡಿರುವುದು ತಪಾಸಣೆಯಲ್ಲಿ ಪತ್ತೆಯಾಗಿತ್ತು. ಕೆಲವು ಪ್ರಕರಣಗಳಲ್ಲಿ ವಿಚಾರಣಾ ದಿನಾಂಕ ನೀಡದಿರುವುದು ಹಾಗೂ ‘ಆರ್ಡ್‌ ಶೀಟ್‌’ಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಪತ್ತೆಯಾಗಿತ್ತು ಎಂಬ ಅಂಶ ವರದಿಯಲ್ಲಿತ್ತು.

ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಟೆಯಲ್ಲಿ ನಿರತರಾಗಿದ್ದುದನ್ನೂ ತನಿಖಾ ತಂಡಗಳು ವರದಿಯಲ್ಲಿ ಉಲ್ಲೇಖಿಸಿದ್ದವು. ಸಕಾಲ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಮಾಡದಿರುವುದೂ ಪತ್ತೆಯಾಗಿತ್ತು. ಹಾಜರಾತಿ ಕಡತಕ್ಕೆ ಸಹಿ ಮಾಡದೆ ಗೈರಾಗಿರುವುದು ಕೂಡ ಕಂಡುಬಂದಿತ್ತು. ಸರ್ಕಾರದ ಕಚೇರಿಗಳಿಂದ ಬಂದಿರುವ ಕಡತ ಗಳನ್ನೂ ವಿಲೇವಾರಿ ಮಾಡದಿರುವುದು ಕೆಲವು ಕಚೇರಿಗಳಲ್ಲಿ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.