ADVERTISEMENT

ಲೋಕಸಭೆ: ನಾಯಕರ ಭರ್ಜರಿ ತಯಾರಿ

ಇದೇ 10ರ ಬಳಿಕ ಮೈತ್ರಿ ಮಾತುಕತೆ ಆರಂಭ: ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 18:52 IST
Last Updated 3 ಫೆಬ್ರುವರಿ 2019, 18:52 IST

ಬೆಂಗಳೂರು/ಮಂಗಳೂರು: ಲೋಕಸಭೆ ಚುನಾವಣೆಯ ಹಣಾಹಣಿಗೆ ರಾಜಕೀಯ ನಾಯಕರು ಬಿರುಸಿನ ಸಿದ್ಧತೆ ನಡೆಸಿದ್ದಾರೆ. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಸರಣಿ ಸಭೆಗಳು, ರ್‍ಯಾಲಿಗಳಿಗೆ ತಯಾರಿಯೂ ನಡೆದಿವೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್–ಕಾಂಗ್ರೆಸ್ ಪಕ್ಷಗಳು ಲೋಕಸಭೆ ಚುನಾವಣೆಯಲ್ಲೂ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಸ್ಫರ್ಧಿಸಲಿವೆ ಎಂದು ಆ ಪಕ್ಷಗಳು ನಾಯಕರು ಪ್ರತಿಪಾದಿಸಿದ್ದಾರೆ.

ಆದರೆ, ಹಳೆ ಮೈಸೂರು ಭಾಗದ ಎಂಟು ಸ್ಥಾನಗಳಿಗೆ ಜೆಡಿಎಸ್‌ ಪಟ್ಟು ಹಿಡಿದಿರುವುದು ‘ಮೈತ್ರಿ’ ಮಧ್ಯೆ ಗೊಂದಲಕ್ಕೆ ಕಾರಣವಾಗಿದೆ.

ADVERTISEMENT

ಶನಿವಾರ ಮಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ‘ಲೋಕಸಭಾ ಚುನಾವಣೆಯ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಫೆಬ್ರುವರಿ 10ರ ಬಳಿಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಸಭೆ ನಡೆಯಲಿದೆ. ಸೀಟು ಹಂಚಿಕೆ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು. ಆ ಬಳಿಕವೇ ಒಪ್ಪಂದವನ್ನು ಅಂತಿಮಗೊಳಿಸಲಾಗುವುದು’ ಎಂದರು.

ತಲೆನೋವು ತಂದ ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ಯಾರಿಗೆ ಸೇರಬೇಕು ಎಂಬ ಬಗ್ಗೆ ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಮಧ್ಯೆ ಗೊಂದಲ ಮೂಡಿದೆ.

ಈ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಸುಮಲತಾ ಅಂಬರೀಷ್ ಆಸಕ್ತಿ ತೋರಿದ್ದಾರೆ. ಜೆಡಿಎಸ್‌ನಿಂದ ಕುಮಾರಸ್ವಾಮಿ ಪುತ್ರ ನಿಖಿಲ್‌ಕುಮಾರ್ ಅವರನ್ನು ಕಣಕ್ಕೆ ಇಳಿಸುವ ಚಿಂತನೆ ಇದೆ. ಇದು ಉಭಯ ಪಕ್ಷಗಳ ನಾಯಕರ ಮಧ್ಯೆ ತಕರಾರಿಗೆ ಕಾರಣವಾಗಿದೆ.

ಸುಮಲತಾ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸುವ ಬಗ್ಗೆ ಆ ಪಕ್ಷದ ನಾಯಕರೇ ಆಸಕ್ತಿ ಹೊಂದಿದ್ದಾರೆ. ಒಂದು ವೇಳೆ ಮಂಡ್ಯವನ್ನು ಬಿಟ್ಟುಕೊಡಲೇಬೇಕಾದ ಸನ್ನಿವೇಶ ಎದುರಾದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸುಮಲತಾ ಅವರನ್ನು ಕಣಕ್ಕೆ ಇಳಿಸುವ ಆಲೋಚನೆ ನಾಯಕರದ್ದಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಚ್.ಎನ್‌. ಅನಂತಕುಮಾರ್ ನಿಧನರಾಗಿದ್ದು, ಈ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

‘ಮಂಡ್ಯ ಬಿಟ್ಟುಕೊಡುತ್ತೇವೆ, ದಕ್ಷಿಣದಲ್ಲಿ ಸುಮಲತಾ ಅವರನ್ನು ಗೆಲ್ಲಿಸಿಕೊಡಬೇಕು’ ಎಂಬ ಷರತ್ತನ್ನು ಜೆಡಿಎಸ್‌ ನಾಯಕರಾದ ದೇವೇಗೌಡರಿಗೆ ಹಾಕುವ ಚಿಂತನೆ ಕಾಂಗ್ರೆಸ್ ನಾಯಕರಲ್ಲಿದೆ ಎನ್ನಲಾಗಿದೆ.

ಬೆಂಗಳೂರು ‘ಉತ್ತರ’ದಲ್ಲಿ ಸದಾನಂದಗೌಡ ತಯಾರಿ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಡಿ.ವಿ. ಸದಾನಂದಗೌಡ, ಚುನಾವಣೆ ಸಿದ್ಧತಾ ಸಭೆಯನ್ನು ಭಾನುವಾರ ಆರಂಭಿಸಿದರು. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಚಿಂತನೆಯಲ್ಲಿದ್ದಾರೆ. ಗೌಡರು ಸ್ಪರ್ಧಿಸಿದರೆ ಗೆಲ್ಲುವ ಮಾರ್ಗಗಳೇನು ಎಂಬ ಬಗ್ಗೆ ಸದಾನಂದಗೌಡ ಚರ್ಚೆ ನಡೆಸಿದರು.

‘ಗೌಡರು ಸ್ಪರ್ಧಿಸಿದರೆ ಅಡ್ಡಿಯಿಲ್ಲ. ಪ್ರಬಲ ಎದುರಾಳಿ ಎದುರು ಸ್ಪರ್ಧಿಸಲು ನಾನು ಉತ್ಸುಕನಾಗಿದ್ದೇನೆ’ ಎಂದರು.

6ರಂದು ಕಾಂಗ್ರೆಸ್‌ ಸರ್ವ ಸದಸ್ಯರ ಸಭೆ
ಲೋಕಸಭೆ ಚುನಾವಣೆಗೆ ಮೊದಲ ಹಂತದ ಸಭೆ ನಡೆಸಿರುವ ಕಾಂಗ್ರೆಸ್ ನಾಯಕರು, ವಿಸ್ತೃತ ಕಾರ್ಯತಂತ್ರ ರೂಪಿಸಲು ಇದೇ 6ರಂದು ಕೆಪಿಸಿಸಿ ಸರ್ವ ಸದಸ್ಯರ ಸಭೆಯನ್ನು ಕರೆದಿದ್ದಾರೆ.

ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಪಕ್ಷದ ಹೈಕಮಾಂಡ್ ಗುರಿ ನೀಡಿದೆ. ಪ್ರದೇಶವಾರು ಸಭೆಗಳನ್ನು ಮುಗಿಸಿರುವ ವೇಣುಗೋಪಾಲ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಯಾವ ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಹುದು, ಯಾವ ಕ್ಷೇತ್ರಗಳಲ್ಲಿ ಬಲ ಇದೆ ಎಂಬ ಮಾಹಿತಿಯನ್ನು ಈಗಾಗಲೇ ಪಡೆದಿದ್ದಾರೆ.

ಬುಧವಾರ ನಡೆಯಲಿರುವ ಸಭೆಗೆ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಹಾಲಿ–ಮಾಜಿ ಸಂಸದರು, ಶಾಸಕರನ್ನೂ ಆಹ್ವಾನಿಸಲಾಗಿದೆ. ಚುನಾವಣಾ ಕಾರ್ಯತಂತ್ರದ ಬಗ್ಗೆ ಪಕ್ಷದ ನಾಯಕರು ಪಾಠ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.