ADVERTISEMENT

‘ಮೋದಿ ವಿಜಯ ಸಂಕಲ್ಪ ಯಾತ್ರೆ’ ನಡೆಸಲು ಬಿ.ಎಸ್ ಯಡಿಯೂರಪ್ಪ ನಿರ್ಧಾರ

21ರಂದು ಲೋಕಸಭಾ ಚುನಾವಣಾ ‍ಪ್ರಚಾರಕ್ಕೆ ಬಿಜೆಪಿಯಿಂದ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:24 IST
Last Updated 18 ಫೆಬ್ರುವರಿ 2019, 20:24 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ‘ಮೋದಿ ವಿಜಯ ಸಂಕಲ್ಪ ಯಾತ್ರೆ’ ನಡೆಸಲಿದ್ದಾರೆ.

ದೇವನಹಳ್ಳಿಯಿಂದ ಆರಂಭವಾಗಲಿರುವ ಯಾತ್ರೆಯನ್ನು ಇದೇ 21ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದಾರೆ.ಮಾರ್ಚ್‌ 19ರವರೆಗೆ ಯಾತ್ರೆ ಸಾಗಲಿದೆ.

ಹಿರಿಯ ನಾಯಕ ಎಸ್‌.ಎಂ.ಕೃಷ್ಣ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ರಮೇಶ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್‌, ಸಂಸದ ಪ್ರಹ್ಲಾದ ಜೋಷಿ, ಶಾಸಕರಾದ ಜಗದೀಶ ಶೆಟ್ಟರ್, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಆರ್‌ ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು, ಸಿ.ಎಂ.ಉದಾಸಿ, ಮುಖಂಡರಾದ ಮಾಲೀ
ಕಯ್ಯ ಗುತ್ತೇದಾರ್, ಬಾಬುರಾವ್‌ ಚಿಂಚನಸೂರು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರ‍ಪ್ಪ‌ ಅವರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ಪ್ರಮುಖ ಪಟ್ಟಣಗಳಲ್ಲಿ ಯಾತ್ರೆ ಸಾಗಲಿದೆ ಎಂದರು.

ಬೈಕ್‌ ರ‍್ಯಾಲಿ: ಪಕ್ಷದ ಕಾರ್ಯಕರ್ತರು ಮಾರ್ಚ್‌ 2ರಂದು ಪಕ್ಷದ ಧ್ವಜ ಕಟ್ಟಿ ಬೈಕ್‌ ರ‍್ಯಾಲಿ ನಡೆಸಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಧ್ವಜ ಹಾಕಿದ ಬೈಕ್‌ ಮೇಲೆ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ 150 ಕಿ.ಮೀ.ವರೆಗೆ ಹಾಗೂ ಪಟ್ಟಣ ಪ್ರದೇಶದಲ್ಲಿ 30 ಕಿ.ಮೀ.ಯಿಂದ 60 ಕಿ.ಮೀ.ವರೆಗೆ ಕ್ರಮಿಸಲಿದ್ದಾರೆ. 224 ಕ್ಷೇತ್ರಗಳಲ್ಲಿ ಕನಿಷ್ಠ 1,000 ಬೈಕ್‌ಗಳು ಇರುವಂತೆ ರ‍್ಯಾಲಿ ನಡೆಸಲಾಗುತ್ತದೆ ಎಂದರು.

ಪ್ರಧಾನಿ ಸಂಘಟನಾ ಸಂವಾದ

ಪ್ರಧಾನಮಂತ್ರಿ ಮೋದಿ ಅವರು ಇಡೀ ದೇಶದ ಬೂತ್‌ ಕಾರ್ಯಕರ್ತರೊಂದಿಗೆ ಇದೇ 28ರಂದು ಒಂದೇ ಸಲಕ್ಕೆ ಸಂವಾದ ನಡೆಸಲಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ 1,000 ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುತ್ತದೆ. ಸುಮಾರು 2.50 ಲಕ್ಷ ಕಾರ್ಯಕರ್ತರು ಬೆಳಿಗ್ಗೆ 11ಕ್ಕೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಕಮಲ ಜ್ಯೋತಿ ಸಂಕಲ್ಪ

ಇದೇ 26ರಂದು ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೇಂದ್ರ ಸರ್ಕಾರದ ಫಲಾನುಭವಿಗಳು ಹಾಗೂ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿ ಒಂದೇ ಕಡೆ ಸೇರಿ ದೀಪೋತ್ಸವ ಕಾರ್ಯಕ್ರಮ ಆಚರಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಈ ಕಾರ್ಯಕ್ರಮ ರಾತ್ರಿ 7 ಗಂಟೆಗೆ ನಡೆಯಲಿದ್ದು, ಎಲ್ಲ ಬೂತ್‌ಗಳಲ್ಲಿ ರಂಗೋಲಿ ಹಾಕಿ, ಕಮಲ ದೀ‍ಪ ಹಚ್ಚಲಿದ್ದಾರೆ. ಇದರಲ್ಲಿ 8 ಲಕ್ಷ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

**

ಆಪರೇಷನ್‌ ಆಡಿಯೊದಿಂದ ಬಿಜೆಪಿಗೆ ಲಾಭ

‘ಆಪರೇಷನ್‌ ಕಮಲ’ ಆಡಿಯೊ ಪ್ರಕರಣವು ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಪ್ರಕರಣವು ಶೇ 100ರಷ್ಟು ರಾಜಕೀಯ ಷಡ್ಯಂತ್ರ ಎಂಬುದು ಸಾಬೀತಾಗಲಿದ್ದು, ಪಕ್ಷಕ್ಕೆ ಲಾಭ ನೀಡಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅಳಿವು–ಉಳಿವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮೈತ್ರಿ ಸರ್ಕಾರದ ಅತೃಪ್ತ ಶಾಸಕರ ಮುಂಬೈ ವಾಸ್ತವ್ಯಕ್ಕೂ ನಮಗೂ ಸಂಬಂಧ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದರು.

‘ಪ್ರಧಾನಿ ಮೋದಿ ಅಲೆ ಇರುವುದರಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೋದಿ ವಿಜಯ ಸಂಕಲ್ಪ ಯಾತ್ರೆ ವೇಳೆಯಲ್ಲೇ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಆಕಾಂಕ್ಷಿಗಳನ್ನು ಗುರುತಿಸಲಾಗುವುದು. ಬಳಿಕ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು’ ಎಂದು ಅವರು ತಿಳಿಸಿದರು.

‘ರಾಜ್ಯದ ಹಾಲಿ ಸಂಸದರು ಶಕ್ತಿ ಮೀರಿ ಕಾರ್ಯನಿರ್ವಹಿಸಿದ್ದಾರೆ. ಹಾಲಿ ಸಂಸದರಿರುವ ಕ್ಷೇತ್ರಗಳ ಪೈಕಿ ಅನಿವಾರ್ಯವಾಗಿ ಒಂದೆರಡು ಕಡೆ ಬದಲಾವಣೆ ಮಾಡಬೇಕಾಗಬಹುದು. ಆ ಬಗ್ಗೆ ಕೇಂದ್ರದ ನಾಯಕರೇ ಸೂಚನೆ ನೀಡಲಿದ್ದಾರೆ. ಅವರೇ ನಿರ್ಧಾರ ಕೈಗೊಳ್ಳಲಿ
ದ್ದಾರೆ’ ಎಂದರು.

‘ಮಾರ್ಚ್‌ 1ರಂದು ಕಲಬುರ್ಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಸಮಾವೇಶದಲ್ಲಿ ಕಾಂಗ್ರೆಸ್‌ ಶಾಸಕ ಡಾ.ಉಮೇಶ ಜಾಧವ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಇದೆಯಲ್ಲ’ ಎಂಬ ‍ಪ್ರಶ್ನೆಗೆ ಉತ್ತರಿಸಿದ ಅವರು, ‘ಈವರೆಗೆ ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ಆ ದಿನವರೆಗೆ ಕಾದು ನೋಡೋಣ' ಎಂದರು.

ಶಾಸಕ ಆರ್‌. ಅಶೋಕ, ‘ಕಲಬುರ್ಗಿಯ ಸಮಾವೇಶಕ್ಕೆ ವ್ಯಾಪಕ ಸಿದ್ಧತೆ ನಡೆಸಲಾಗಿದೆ. ಮೋದಿ ಅವರು ಮತ್ತೆ ಮೂರು ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ಸೇರಿದಂತೆ ಪ್ರಮುಖ ವಲಯಗಳನ್ನು ಗುರುತಿಸಲಾಗಿದ್ದು, ಪ್ರಧಾನಿಯವರ ಸಮಯಾವಕಾಶ ನೋಡಿಕೊಂಡು ಆಯೋಜಿಸಲಾಗುವುದು’ಎಂದರು.


21ಕ್ಕೆ ದೇವನಹಳ್ಳಿಗೆ ಅಮಿತ್‌ ಶಾ

ಇಂದು ಮತ್ತು ನಾಳೆ ಚುನಾಯಿತ ಪ್ರತಿನಿಧಿಗಳಿಂದ 25 ಮನೆಗಳ ಸಂಪರ್ಕ

ಮಾರ್ಚ್‌ 2ರಂದು ವಿಜಯ ಸಂಕಲ್ಪ ಬೈಕ್‌ ರ‍್ಯಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.