ADVERTISEMENT

ಅರಬೈಲ್ ಬಳಿ ಲಾರಿ ಪಲ್ಟಿ: ಸವಣೂರಿನ 10 ಜನರಿಗೆ ಹುಬ್ಬಳ್ಳಿ KIMSನಲ್ಲಿ ಚಿಕಿತ್ಸೆ

ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಘಟ್ಟದಲ್ಲಿ ಬುಧವಾರ ನಸುಕಿನ ಜಾವ ಕುಮಟಾಕ್ಕೆ ಹಣ್ಣು, ತರಕಾರಿ ಸಾಗಿಸುತ್ತಿದ್ದ ಮಿನಿಲಾರಿ ಉರುಳಿ ಅಪಘಾತ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 5:40 IST
Last Updated 22 ಜನವರಿ 2025, 5:40 IST
<div class="paragraphs"><p>ಅರಬೈಲ್ ಬಳಿ ಲಾರಿ ಪಲ್ಟಿ: ಸವಣೂರಿನ 10 ಜನರಿಗೆ ಹುಬ್ಬಳ್ಳಿ KIMSನಲ್ಲಿ ಚಿಕಿತ್ಸೆ</p></div>

ಅರಬೈಲ್ ಬಳಿ ಲಾರಿ ಪಲ್ಟಿ: ಸವಣೂರಿನ 10 ಜನರಿಗೆ ಹುಬ್ಬಳ್ಳಿ KIMSನಲ್ಲಿ ಚಿಕಿತ್ಸೆ

   

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಘಟ್ಟದಲ್ಲಿ ಬುಧವಾರ ನಸುಕಿನ ಜಾವ ಕುಮಟಾಕ್ಕೆ ಹಣ್ಣು, ತರಕಾರಿ ಸಾಗಿಸುತ್ತಿದ್ದ ಮಿನಿಲಾರಿ ಉರುಳಿ ಗಂಭೀರವಾಗಿ ಗಾಯಗೊಂಡಿದ್ದ 10 ಮಂದಿಯನ್ನು ಹುಬ್ಬಳ್ಳಿ ಕೆಎಂಸಿ-ಆರ್‌‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ 11 ಮಂದಿಯನ್ನು ಬೆಳಿಗ್ಗೆ 6.30ಕ್ಕೆ ಆಂಬುಲೆನ್ಸ್‌ನಲ್ಲಿ ಕೆಎಂಸಿ-ಆರ್‌ಐ ಆಸ್ಪತ್ರೆಗೆ ಕರೆತರಲಾಗಿತ್ತು‌. ಅವರಲ್ಲಿ ಸವಣೂರಿನ ಜಲಾಲ್ ಬಾಷಾ(27) ಆಸ್ಪತ್ರೆಗೆ ದಾಖಲಾಗುವ ಪೂರ್ವವೇ ಮೃತಪಟ್ಟಿದ್ದಾರೆ. ಉಳಿದವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಗಾಯಗೊಂಡವರೆಲ್ಲ ತರಕಾರಿ ವ್ಯಾಪರಸ್ಥರು, ಹಮಾಲಿ ಕಾರ್ಮಿಕರಾಗಿದ್ದಾರೆ‌.

ADVERTISEMENT

ಮಲ್ಲಿಕ್ ರಿಹಾನ್(22), ಅಪ್ಸರ್‌ಖಾನ್(20), ಅಶ್ರಫ್ ಎಲ್(20), ನಿಜಾಮುದ್ದೀನ್ ಸುಧಾಗರ್(28) ಖಾಜಾ ಹುಸೇನ್(30), ಖಾಜಾ ಮೈನ್(21), ಮಹ್ಮದ್ ಸಾದಿಕ್(21) ಮರ್ದಾನ್ ಸಾಬ್(21), ಇರ್ಫಾನ್ ಗುಡಿಗೇರಿ(18), ಜಾಫರ್ ಸವಣೂರು(28) ಗಾಯಗೊಂಡವರು.

'ಆಸ್ಪತ್ರೆಗೆ ದಾಖಲಾಗುವ ಮೊದಲೇ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳ ಚಿಕಿತ್ಸೆಗೆ ವೈದ್ಯರ ವಿಶೇಷ ತಂಡ ರಚಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ' ಎಂದು ಕೆಎಂಸಿ-ಆರ್‌ಐ ನಿರ್ದೇಶಕ ಎಸ್.ಎಫ್. ಕಮ್ಮಾರ್ ತಿಳಿಸಿದ್ದಾರೆ.

ಕೀಮ್ಸ್ ವಿರುದ್ಧ ಗಾಯಾಳುಗಳ ಸಂಬಂಧಿಕರ ಆಕ್ರೋಶ

'ಬೆಳಿಗ್ಗೆ 6 ಗಂಟೆಗೆ ಗಾಯಾಳುಗಳನ್ನು ಅಸ್ಪತ್ರೆಗೆ ಕರೆದುಕೊಂಡು ಬಂದರೂ ಚಿಕಿತ್ಸೆ ನೀಡಲು ಯಾವೊಬ್ಬ ವೈದ್ಯರೂ ಇರಲಿಲ್ಲ. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಕೊಡುವುದನ್ನು ಬಿಟ್ಟು, ಚೀಟಿ ಮಾಡಿ, ಆಧಾರ್ ಕಾರ್ಡ್ ಕೊಡಿ ಎನ್ನುತ್ತಾರೆ. ಜನಪ್ರತಿನಿಧಿಗಳಿಂದ, ದೊಡ್ಡವರಿಂದ ಹೇಳಿಸಿದರೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಬಡವರು ಏನು ಮಾಡಬೇಕು. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಇಲ್ಲಿಯೇ ಪ್ರತಿಭಟನೆ ನಡೆಸುತ್ತೇವೆ' ಎಂದು ಸವಣೂರು ನಿವಾಸಿ ಜುಬೇರ್ ಆಕ್ರೋಶ ವ್ಯಕ್ತಪಡಿಸಿದರು.

'ಮಿನಿಲಾರಿಯಲ್ಲಿ ತರಕಾರಿ, ಹಣ್ಣು ತುಂಬಿಕೊಂಡು ಸವಣೂರಿನಿಂದ ಕುಮಟಾಕ್ಕೆ ರಾತ್ರಿ 12ಕ್ಕೆ ತೆರಳಿದ್ದರು. ನಸುಕಿನ ಜಾವ 2.30ರ ವೇಳೆ ಅರಬೈಲ್ ಘಟ್ಟದಲ್ಲಿ ಲಾರಿ ಉರುಳಿದೆ. ಅದರಲ್ಲಿದ್ದ ಎಲ್ಲರೂ ಹಮಾಲಿ ಕಾರ್ಮಿಕರು, ವ್ಯಾಪಾರಸ್ಥರು. ಕುಮಟಾದಲ್ಲಿ ನಡೆಯುವ ಬುಧವಾರ ಸಂತೆ ಮುಗಿಸಿಕೊಂಡು ವಾಪಸ್ಸು ಸವಣೂರಿಗೆ ಬರುವವರಾಗಿದ್ದರು' ಎಂದು ಜುಬೇರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.