ADVERTISEMENT

ಬೆಂಗಳೂರಿನ ಕೆರೆಗಳಲ್ಲಿ ಕಡಿಮೆ ಆಮ್ಲಜನಕ: ಮಾಲಿನ್ಯ ಮಂಡಳಿ ವಿವರಣೆ ಕೇಳಿದ NGT

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 15:47 IST
Last Updated 29 ಜನವರಿ 2024, 15:47 IST
   

ನವದೆಹಲಿ: ಬೆಂಗಳೂರಿನ ಕೆರೆಗಳಲ್ಲಿ ಕಡಿಮೆ ಆಮ್ಲಜನಕ ಮಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಯಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿವರಣೆ ಕೇಳಿದೆ. 

ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪ್ರಧಾನ ಪೀಠದ ಮುಖ್ಯಸ್ಥ ಪ್ರಕಾಶ್‌ ಶ್ರೀವಾಸ್ತವ ಹಾಗೂ ತಜ್ಞ ಸದಸ್ಯ ಡಾ.ಎ.ಸೆಂಥಿಲ್‌ ವೇಲ್‌ ನೇತೃತ್ವದ ಪೀಠ, ‘ಕರಗಿದ ಆಮ್ಲಜನಕವು ಸಾರ್ವಜನಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವುದರಿಂದ ಹಾಗೂ ಕೋಲಿಫಾರ್ಮ್‌ ಗರಿಷ್ಠ ಮಟ್ಟಕ್ಕೆ ಏರಿರುವುದರಿಂದ ಬೆಂಗಳೂರು ನಗರದಲ್ಲಿರುವ ಶೇ 10ರಷ್ಟು ಕೆರೆಗಳು ಗಂಭೀರ ಸ್ಥಿತಿಯಲ್ಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಕಳವಳಕಾರಿ ಸಂಗತಿ’ ಎಂದು ಅಭಿಪ್ರಾಯಪಟ್ಟಿತು. 

ಮಡಿವಾಳ, ಹೇರೋಹಳ್ಳಿ, ಕರಿಓಬನಹಳ್ಳಿ, ದಾಸರಹಳ್ಳಿ, ವರ್ತೂರು, ಉತ್ತರಹಳ್ಳಿ ದೊರೆಕೆರೆ, ಮುಗಳೂರು ಬಳಿಯ ದಕ್ಷಿಣ ಪಿನಾಕಿನಿ ನದಿ, ದೇವರಬೀಸನಹಳ್ಳಿ, ರಾಂಪುರ, ಕಮ್ಮಸಂದ್ರ, ಚಂದಾಪುರ, ಹೊಸಕೆರೆಹಳ್ಳಿ ಕೆರೆಗಳಲ್ಲಿ ನವೆಂಬರ್‌ ತಿಂಗಳಲ್ಲಿ ಆಮ್ಲಜನಕ ಮಟ್ಟ ಕಡಿಮೆ ಇದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಶ್ಲೇಷಣಾ ವರದಿಯಲ್ಲಿ ತಿಳಿಸಲಾಗಿದೆ. ಈ ಜಲಮೂಲಗಳಲ್ಲಿ ಫೀಕಲ್ ಕೋಲಿಫಾರ್ಮ್‌ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಕೊಳೆಯುತ್ತಿರುವ ಸಾವಯವ ಪದಾರ್ಥ ಸಹ ಕಡಿಮೆ ಆಮ್ಲಜನಕ ಸಾಂದ್ರತೆಗೆ ಕಾರಣ ಎಂಬುದನ್ನು ಎನ್‌ಜಿಟಿ ಗಮನಿಸಿದೆ.

ADVERTISEMENT

ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿರುವ ಪೀಠವು, ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.