ADVERTISEMENT

ಏರಿದ ದರ: ಒಲೆ ಉರಿಸದ ‘ಅನಿಲ’

ತುಂಬಿದ ಸಿಲಿಂಡರ್ ಖರೀದಿಸದ ಅನಿಲಭಾಗ್ಯ ಫಲಾನುಭವಿಗಳು

ಅಕ್ರಂ ಮೊಹಮ್ಮದ್
Published 4 ಜುಲೈ 2021, 19:53 IST
Last Updated 4 ಜುಲೈ 2021, 19:53 IST
   

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ಗಳ ದರದ ಸತತ ಏರಿಕೆಯಿಂದ ರಾಜ್ಯ ಸರ್ಕಾರದ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯ ಫಲಾನುಭವಿಗಳು ಕಂಗಾಲಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳು ದುಬಾರಿ ದರ ಪಾವತಿಸಲಾಗದೇ ಯೋಜನೆಯಿಂದ ದೂರ ಸರಿಯುತ್ತಿವೆ.

ಅನಿಲ ಭಾಗ್ಯ ಯೋಜನೆಯಡಿ 97,256 ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿತ್ತು. ಈ ಪೈಕಿ 13,461 (ಶೇ 13.8) ಮಂದಿ ಈ ವರ್ಷದ ಆರು ತಿಂಗಳಿನಲ್ಲಿ ಎಲ್‌ಪಿಜಿ ತುಂಬಿದ ಒಂದು ಸಿಲಿಂಡರ್‌ ಕೂಡ ಖರೀದಿಸಿಲ್ಲ. 32,462 ಮಂದಿ ಒಂದೇ ಸಿಲಿಂಡರ್‌ ಖರೀದಿಸಿದ್ದು, ಪ್ರತಿ ಸಿಲಿಂಡರ್‌ ದರ ₹ 800 ದಾಟಿದ ಬಳಿಕ ಖರೀದಿಯನ್ನೇ ಮಾಡಿಲ್ಲ.

‘ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲೂ ಕಳೆದ ವರ್ಷದಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅನುಕೂಲವಾಗುವಂತೆ 5 ಕೆ.ಜಿ. ತೂಕದ ಸಿಲಿಂಡರ್‌ಗಳನ್ನು ವಿತರಿಸುವ ಪ್ರಸ್ತಾವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್‌ ಖರೀದಿಸಿದರೆ ನೇರ ನಗದು ವರ್ಗಾವಣೆ ಮೂಲಕ ಸಹಾಯಧನ ಪಾವತಿಸಲಾಗುತ್ತಿದೆ. ಆದರೆ, ಸರ್ಕಾರ ಉಚಿತವಾಗಿ ನೀಡುವ ಸಿಲಿಂಡರ್‌ ಖಾಲಿಯಾದ ಬಳಿಕ ಖರೀದಿಗೆ ಆಸಕ್ತಿಯನ್ನೇ ತೋರುತ್ತಿಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ದುಬಾರಿ ದರ ಪಾವತಿಸಿ ಸಿಲಿಂಡರ್‌ ಖರೀದಿಸಲು ಅಸಾಧ್ಯವಾಗಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

2018ರಲ್ಲಿ ಅನಿಲ ಭಾಗ್ಯ ಯೋಜನೆ ಆರಂಭಿಸಿದ್ದ ರಾಜ್ಯ ಸರ್ಕಾರ, 30 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಲು ಮುಂದಾಗಿತ್ತು. ನಂತರದ ದಿನಗಳಲ್ಲಿ ಫಲಾನುಭವಿಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಸೀಮಿತಗೊಳಿಸಲಾಗಿತ್ತು. ಪ್ರಸಕ್ತ ವರ್ಷದ ಆರಂಭದಲ್ಲಿ 97,526 ಫಲಾನುಭವಿಗಳಿದ್ದರು.

‘ಗ್ರಾಮೀಣ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೇಗ ಖಾಲಿಯಾಗುವುದಿಲ್ಲ. ಉಚಿತವಾಗಿ ವಿತರಿಸಿದ ಮೊದಲ ಸಿಲಿಂಡರ್‌ ಕೆಲವರ ಮನೆಗಳಲ್ಲಿ ಆರರಿಂದ ಏಳು ತಿಂಗಳವರೆಗೂ ಬಾಳಿಕೆ ಬರುತ್ತದೆ. ಅದು ಖಾಲಿಯಾದ ಬಳಿಕ ಸಿಲಿಂಡರ್‌ ಖರೀದಿಗೆ ಮುಂದಾಗುವವರು ಕಡಿಮೆ’ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸಮಸ್ಯೆಗೆ ಪರಿಹಾರ ಕಲ್ಪಿಸುವ ಯತ್ನ: ‘ಬಿಪಿಎಲ್ ಕುಟುಂಬದವರ ಈ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನ ನಡೆದಿದೆ’ ಆಹಾರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್‌. ಅನಿಲ್‌ ಕುಮಾರ್ ಹೇಳಿದರು.

ದರ ಏರಿಕೆ ಬಳಿಕ ಅನಿಲ ಭಾಗ್ಯ ಫಲಾನುಭವಿಗಳು ಸಿಲಿಂಡರ್‌ ಖರೀದಿಗೆ ಹಿಂದೇಟು ಹಾಕುತ್ತಿರುವುದನ್ನು ಒಪ್ಪಿಕೊಂಡ ಅವರು, ‘ಬಿಪಿಎಲ್‌ ಕುಟುಂಬಗಳಿಗೆ ಅನುಕೂಲವಾಗುವಂತೆ 5 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸುವ ಕುರಿತು ಅನಿಲ ಕಂಪನಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.