ಮಂಗಳೂರು: ಭವ್ಯ ಬಂಗಲೆ, ಅದರೊಳಗೆ ವಿದೇಶಿ–ದೇಶಿ ಮದ್ಯ ಒಳಗೊಂಡ ಮಿನಿ ಬಾರ್, ಚಿನ್ನದ ಲೇಪ ಇರುವಂತೆ ಗೋಚರಿಸುವ ಆಸನಗಳು, ಶೋಕಿಗಾಗಿ ಬಗೆಬಗೆಯ ನವನವೀನ ಆಲಂಕಾರಿಕ ವಸ್ತುಗಳು, ಸಂದೇಹವೇ ಬಾರದಂಥ ಅಡಗುತಾಣ...
ಸಿರಿವಂತ ಉದ್ಯಮಿಗಳನ್ನು ಬಲೆಗೆ ಹಾಕಿ ಬಹುಕೋಟಿ ಮೊತ್ತದ ವಂಚನೆ ಮಾಡಿ ಪೊಲೀಸರ ಬಲೆಗೆ ಬಿದ್ದಿರುವ ಮಂಗಳೂರಿನ ರೋಷನ್ ಸಲ್ಡಾನನ ಐಷಾರಾಮಿ ಜೀವನದ ಪರಿ ಇದು.
ನಗರದ ಕಂಕನಾಡಿಯ ಬಜಾಲ್ ಬೊಲ್ಲಗುಡ್ಡದ ದಿ.ಜಾನ್ ಸಲ್ಡಾನ ಅವರ ಮಗ ರೋಷನ್ ತನ್ನ ವೈಭವೋಪೇತ ಮನೆಯನ್ನೇ ಹಣಕಾಸು ವ್ಯವಹಾರದ ಅಡ್ಡೆಯಾಗಿಸಿದ್ದ. ಈತನನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಶುಕ್ರವಾರ ತಿಳಿಸಿದ್ದಾರೆ.
‘ಆರೋಪಿ ಮಂಗಳೂರಿನಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದ. ಬಹುಕೋಟಿ ಮೊತ್ತದ ಸಾಲದ ಆಮಿಷ ಒಡ್ಡಿ ಉದ್ಯಮಿಗಳನ್ನು ಬಲೆಗೆ ಬೀಳಿಸುತ್ತಿದ್ದ. ಸಾಲ ಬಯಸುವವರಿಂದ ಒಂದರಿಂದ ಎರಡು ಶೇಕಡ ಸ್ಟ್ಯಾಂಪ್ ಡ್ಯೂಟಿ, ಕಮಿಷನ್ ಹೆಸರಿನಲ್ಲಿ ಹಣ ಪಡೆದು ನಂತರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಎಂದು ತಿಳಿಸಿದರು.
ಮಂಗಳೂರು ಮತ್ತು ಚಿತ್ರದುರ್ಗದಲ್ಲಿ ಈಚೆಗೆ ದಾಖಲಿಸಲಾದ ಪ್ರತ್ಯೇಕ ದೂರುಗಳ ಆಧಾರದಲ್ಲಿ ನಗರದ ಸೆನ್ ಠಾಣೆ ಪೊಲೀಸರು ರೋಷನ್‌ನನ್ನು ಆತನ ಮನೆಯ ಅಡಗುತಾಣದಿಂದ ಗುರುವಾರ ರಾತ್ರಿ ಬಂಧಿಸಿದ್ದಾರೆ. ಬೆಂಗಳೂರು, ವಿಜಯಪುರ, ತುಮಕೂರು, ಬಾಗಲಕೋಟೆ, ಕೋಲ್ಕತ್ತಾ, ಗೋವಾ, ಪುಣೆ, ಲಖನೌ, ಸಾಂಗ್ಲಿ ಮೂಲದ ಉದ್ಯಮಿಗಳಿಗೆ ವಂಚನೆ ಮಾಡಿದ್ದಾನೆ. ಬಿಎನ್‌ಎಸ್ ವಿವಿಧ ಕಲಂಗಳ ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
₹2.75 ಕೋಟಿ ಮೌಲ್ಯದ ವಜ್ರದುಂಗುರ:
ಬಂಧಿತ ರೋಷನ್ ಮನೆಯಿಂದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ಖಾಲಿ ಚೆಕ್ ಹಾಳೆಗಳು ಮತ್ತು 667 ಗ್ರಾಂ ಚಿನ್ನದ ಆಭರಣಗಳು ಲಭಿಸಿವೆ. ₹2.75 ಕೋಟಿ ಮೌಲ್ಯದ ವಜ್ರದ ಉಂಗುರವೂ ಲಭಿಸಿದೆ ಎಂದು ಕಮಿಷನರ್ ಅವರು ತಿಳಿಸಿದರು. ಉಳಿದಂತೆ ₹6.72 ಲಕ್ಷ ಬೆಲೆಬಾಳುವ ದೇಶಿ ಮತ್ತು ವಿದೇಶಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯದ ದಾಸ್ತಾನು ಇರಿಸಿದ್ದಕ್ಕಾಗಿ ಅಬಕಾರಿ ಕಾಯ್ದೆಯಡಿಯೂ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲೇ ರೋಷನ್ ₹32 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದ್ದು ಅದಕ್ಕೂ ಹಿಂದಿನ ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನ ಸಹಚರರು ಮತ್ತು ವಂಚನೆಗೆ ಒಳಗಾದವರ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.