ADVERTISEMENT

ಸಜ್ಜನಕೋಲು...'ಚಿದಾನಂದ ಮೂರ್ತಿ'

ಆರ್‌.ಶೇಷಶಾಸ್ತ್ರಿ, ಅನಂತಪುರಂ, ಆಂಧ್ರ­ಪ್ರದೇಶ
Published 11 ಜನವರಿ 2020, 21:31 IST
Last Updated 11 ಜನವರಿ 2020, 21:31 IST
ಚಿದಾನಂದ ಮೂರ್ತಿ
ಚಿದಾನಂದ ಮೂರ್ತಿ   
""
""
""

‘ಯಾವತ್ತೂ ಮೂಲ ಆಕರಗಳಿಗೆ ಹೋಗಿ ನಿಮ್ಮ ಕಣ್ಣಾರೆ ನೋಡಿ, ಓದಿ, ಅದೊಂದೇ ಉತ್ತಮ ಸಂಶೋಧನೆಯ ಮಾರ್ಗ’ ಎಂಬುದಾಗಿ ನನ್ನ ಗುರುಗಳಾದ ತೀ.ನಂ.ಶ್ರೀ.ಯವರು ಸದಾ ನಮ್ಮನ್ನು ಎಚ್ಚರಿಸುತ್ತಿದ್ದರು. ನಮ್ಮ ಊಹೆಯನ್ನೂ ಸಹ ಯಾರೂ ಆಲುಗಿಸಬಾರದು. ಅಷ್ಟರ ಮಟ್ಟಿಗೆ ಮೂಲ ಆಕರಗಳನ್ನು ಆಧರಿಸಿ ಸಂಶೋಧನೆಯಲ್ಲಿ ಊಹೆ ಮಾಡಬೇಕು’ ಎಂಬುದಾಗಿ ನನ್ನ ಗುರುಗಳಾದ ಡಿ.ಎಲ್. ನರಸಿಂಹಾಚಾರ್ಯರು ಹೇಳುತ್ತಿದ್ದರು.’

ಇದು ಸಾಮಾನ್ಯವಾಗಿ ಚಿದಾನಂದ ಮೂರ್ತಿಗಳು ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ ಮಾತುಗಳು.

ಸಂಶೋಧನೆಯನ್ನು ಒಂದು ವ್ರತವಾಗಿ ಸ್ವೀಕರಿಸಿಕೊಂಡು ಸಂಶೋಧನಾರಂಗಕ್ಕೆ ಒಂದು ವ್ಯವಸ್ಥಿತ ವಾದ ಅಧ್ಯಾಯದ ಪದ್ಧತಿಯನ್ನು ನೀತಿನಿಯಮ ರೂಪಿಸಿದವರು ಅವರು.

ADVERTISEMENT

ತಲಸ್ಪರ್ಶಿಯಾದ ಅಧ್ಯಯನವಿಲ್ಲದೆ ಅವರು ಎಂದೂ ಒಂದು ಲೇಖನವನ್ನೂ ಬರೆದವರಲ್ಲ. ಅಷ್ಟೇಕೆ ಯಾವುದೇ ಪತ್ರಿಕಾ ಹೇಳಿಕೆಯನ್ನೂ ನೀಡಿದವರಲ್ಲ. ಅವರ ಸಂಶೋಧನಾಶಿಸ್ತು ಅವರ ಕನ್ನಡ ಚಳವಳಿಯ ಸಂದರ್ಭದಲ್ಲಿ ಎದ್ದುಕಾಣುತ್ತಿತ್ತು.

ಚರ್ಚೆಯ ಸಮಯದಲ್ಲಿ ಯಾರಿಂದಾಗಲೀ ನಮ್ಮ ಅಧ್ಯ ಯನಕ್ಕೆ ಪೂರಕವಾದ ಮಾಹಿತಿಯಾಗಲೀ ವಿಶ್ಲೇಷಣೆಯಾಗಲೀ ಸೂಚನೆ ಯಾಗಲೀ ದೊರೆತರೆ ಅದನ್ನು ಪ್ರಾಮಾ ಣಿಕವಾಗಿ ದಾಖಲಿಸುತ್ತಿದ್ದರು. ಈ ಪ್ರಾಮಾಣಿಕತೆಯೇ ನಮಗೂ ಮತ್ತು ನಮ್ಮ ಸಂಶೋಧನೆಗೂ ವಿಶ್ವಾಸಾರ್ಹತೆ ಯನ್ನು, ಅಷ್ಟೇ ಅಲ್ಲ, ಘನತೆಯನ್ನು ತಂದು ಕೊಡುತ್ತದೆ. ಎಂದೂ ಬೇರೊಬ್ಬರ ಅಭಿಪ್ರಾಯವನ್ನು ನಿಮ್ಮದೆಂಬಂತೆ ಮರೆತೂ ಹೇಳದಂತೆ ಜಾಗ್ರತೆವಹಿಸಿ ಎಂಬುದು ತಮ್ಮ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಲಹೆ, ಎಚ್ಚರಿಕೆ.

‘ಮುಖ್ಯಮಂತ್ರಿ’ ಚಂದ್ರು ಮತ್ತು ಟಿ.ವಿ. ವೆಂಕಟಾಚಲಶಾಸ್ತ್ರೀ ಅವರೊಂದಿಗೆ

ಪುಸ್ತಕಗಳ ಅಧ್ಯಯನಕ್ಕೆ ನೀಡುತ್ತಿ ದ್ದಷ್ಟು ಮಹತ್ವವನ್ನು ಕ್ಷೇತ್ರಕಾರ್ಯದ ಬಗ್ಗೆಯೂ ನೀಡಿ ಸಂಶೋಧನೆಗೆ ಹೊಸ ಆಯಾಮ ನೀಡಿದರು. ಕ್ಷೇತ್ರ ಕಾರ್ಯಗಳಲ್ಲಿ ಒಬ್ಬ ಮುಗ್ಧ ಹುಡುಗ ನಂತೆ ಬೆರಗಿನಿಂದ ಎಲ್ಲವನ್ನು ಶ್ರದ್ಧೆಯಿಂದ ನೋಡುತ್ತಿದ್ದರು. ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೀತಿ ಅನೂಹ್ಯವಾದುದು. ಒಂದು ಪದವಾಗಲೀ ವಸ್ತುವಾಗಲೀ ವ್ಯಕ್ತಿಯಾಗಲೀ ಸ್ಥಳವಾಗಲೀ ಅವರ ಕ್ಷಕಿರಣಕ್ಕೆ ಒಳಗಾಗುತ್ತಿತ್ತು. ಈ ಕ್ಷಕಿರಣಗಳನ್ನು ಅವರ ಸಂಶೋಧನಾ ಲೇಖನ ಗಳಲ್ಲಿ ಕಾಣಬಹುದು.

ನಮ್ಮ ಊರು ಸಂತೇಕಲ್ಲಹಳ್ಳಿಯಲ್ಲಿ ದೊರೆತ ಮಡಿಕೆ ಚೂರಿನ ಮೇಲಿನ ಶಾಸನವನ್ನು ಗಮನಿಸಿ, ನನ್ನೊಂದಿಗೆ ನಮ್ಮೂರಿಗೆ ಬಂದು ಕ್ಷೇತ್ರ ಕಾರ್ಯ ಮಾಡಿ ಇನ್ನೂ ಹಲವಾರು ಮೌಲಿಕ ಐತಿಹಾಸಿಕ ಪ್ರಾಗೈತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿದರು. ಆ ಬಗ್ಗೆ ತಮ್ಮೊಂದಿಗೆ ನನ್ನನ್ನು ಸಹಲೇಖಕನನ್ನಾಗಿ ಮಾಡಿ ಕೊಂಡು ಪ್ರಜಾವಾಣಿ ಸಾಪ‍್ತಾಹಿಕ ಪುರವಣಿಯಲ್ಲಿ ಲೇಖನವನ್ನು ಪ್ರಕಟಿಸಿದರು. ಅದು ಅವರು ಪ್ರೋತ್ಸಾಹ ನೀಡುತ್ತಿದ್ದ ವಿಧಾನ.

ಎಲ್‌ಎಸ್‌ಎಸ್‌, ಜಿ. ನಾರಾಯಣ ಎಚ್.ಎಸ್‌. ದೊರೆಸ್ವಾಮಿ, ಗೊರುಚ ಅವರೊಂದಿಗೆ

ಎಪ್ಪತ್ತರ ದಶಕದಲ್ಲಿ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಸ್ಮಾರಕ ಶಿಲೆಗಳ ಬಗ್ಗೆ ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಅದಕ್ಕೆ ಚಿದಾನಂದ ಮೂರ್ತಿಯವರಿಗೆ ಆಹ್ವಾನ ಬಂದಿತು. ‘ಈ ಬಗ್ಗೆ ನನ್ನ ವಿದ್ಯಾರ್ಥಿ ನನಗಿಂತಲೂ ಹೆಚ್ವಿನ ಸಂಶೋಧನೆ ಮಾಡಿದ್ದಾನೆ. ಆತನನ್ನು ಆಹ್ವಾನಿಸಿ’ ಎಂದು ಅವರಿಗೆ ಪತ್ರ ಬರೆದು, ನಾನು ವಿಚಾರ ಸಂಕಿರಣದಲ್ಲಿ ಭಾಗವಹಿಸುವಂತೆ ಮಾಡಿದರು. ಒಂದು ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸುವ ಲೇಖನ ಹೇಗಿರಬೇಕು, ಅದನ್ನು ಹೇಗೆ ಮಂಡಿಸಬೇಕು ಎಂದು ಅಡಿಗಡಿಗೆ ತಿಳಿಸುತ್ತಿದ್ದರು. ಇದು ನನ್ನ ಗುರುಗಳ ಘನತೆ, ವ್ಯಕ್ತಿತ್ವ.

***

ಹಾ.ಮಾ. ನಾಯಕ, ಪಾಪು, ಗೊರುಚ ಅವರೊಂದಿಗೆ

ಕ್ರಿಯಾಶೀಲ ವ್ಯಕ್ತಿತ್ವ
ರ್‍ಯಾಂಕ್‌ ವಿದ್ಯಾರ್ಥಿಯಾಗಿದ್ದರೂ ಎಂಜಿನಿಯರಿಂಗ್, ವೈದ್ಯಕೀಯದತ್ತ ಮನ ಮಾಡದೆ ಕನ್ನಡವನ್ನೇ ಅಧ್ಯಯನ ವಿಷಯವನ್ನಾಗಿ ಆಯ್ದುಕೊಂಡು ಸದಾಕಾಲ ಕನ್ನಡ ಕಾಯುವ ಯೋಧನಾಗಿ ಚಿದಾನಂದಮೂರ್ತಿ ಕಾರ್ಯನಿರ್ವಹಿಸಿದ್ದರು. ಕನ್ನಡ ಉಳಿಯಬೇಕು, ಬೆಳೆಯಬೇಕು ಎನ್ನುತ್ತಿದ್ದ ಅವರ ಕನ್ನಡದ ಯೋಧನಾಗಿದ್ದುಕೊಂಡು ಕಿರಿಯರಿಗೆ, ಅಭಿಮಾನಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ರಾಷ್ಟ್ರೀಯವಾದಿ ಚಿಂತನೆ ಹೊಂದಿದ್ದವರು.‌ ಭಿನ್ನಾಭಿಪ್ರಾಯ ಗಳ ನಡುವೆಯೂ ಸ್ನೇಹ ಸಂಪಾದಿಸುವ, ಕೆಲಸ ಮಾಡಿಕೊಂಡು ಹೋಗುವ ಕಲೆ ಅವರಲ್ಲಿತ್ತು. ನಿರಂತರ ಅಧ್ಯಯನಶೀಲರೂ ಕ್ರಿಯಾಶೀಲರೂ ಆಗಿದ್ದ ಅವರು ಜನರ ಜತೆ ಬೆರೆಯುತ್ತಿದ್ದರು. ಜೀವನದ ಕೊನೆಯ ತನಕವೂ ಸದಾ ಲವಲವಿಕೆ, ಚಟುವಟಿಕೆಯಿಂದ ಇದ್ದರು.
-ಟಿ.ವಿ. ವೆಂಕಟಾಚಲಶಾಸ್ತ್ರೀ, ಸಂಶೋಧಕ

**
ಆದರ್ಶ ಸಾಹಿತಿ
57 ವರ್ಷಗಳ ಹಿಂದೆ ನಾನು ಚಿಮೂ ಅವರ ವಿದ್ಯಾರ್ಥಿಯಾಗಿದ್ದೆ. ಅವರ ಮಾರ್ಗದರ್ಶನದಲ್ಲಿ ಮೊದಲ ಪಿಎಚ್‌.ಡಿ ಪಡೆದವನು ನಾನೇ. ಧಾರವಾಡ, ಮೈಸೂರಿನಲ್ಲಿ ಗೋಕಾಕ್‌ ಚಳವಳಿ ಶುರುವಾದಾಗ ಆ ಚಳವಳಿಯನ್ನು ನಾವು ಬೆಂಗಳೂರಿನಲ್ಲೂ ಆರಂಭಿಸಲು ಪ್ರಸ್ತಾಪಿಸಿದಾಗ ತಕ್ಷಣ ಕಾರ್ಯೋನ್ಮುಖರಾದವರು ಚಿಮೂ. ಚಳವಳಿಯ ಕಾವು ಬೆಂಗಳೂರಿನಲ್ಲೂ ತೀವ್ರತೆ ಪಡೆಯುವಲ್ಲಿ ಅವರು ಪಾತ್ರ ವಹಿಸಿದ್ದಾರೆ. ತ್ರಿಭಾಷಾ ಸೂತ್ರ ಒಪ್ಪಿಕೊಂಡಾಗ ನಾಡಿನಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಪ್ರೌಢಶಿಕ್ಷಣದಲ್ಲಿ ಕನ್ನಡ ವಿಷಯಕ್ಕೆ 125 ಅಂಕ ನಿಗದಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ – ಹೀಗೆ ಕನ್ನಡದ ಪ್ರಮುಖ ಕೆಲಸಗಳಲ್ಲಿ ಅವರ ಹೋರಾಟದ ಪರಿಶ್ರಮ ಇದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಾಗ ಲೇಖಕರ ನೂರು ಪುಸ್ತಕಗಳನ್ನು ಪ್ರಕಟಿಸುವ ಪ್ರಸ್ತಾಪ ಬಂತು. ಆಗ ಗೋಕಾಕ್‌ ಚಳವಳಿ ತೀವ್ರಗೊಂಡ ಸಂದರ್ಭ. ಗೋಕಾಕ್‌ ವರದಿ ಅನುಷ್ಠಾನಗೊಳಿಸುವುದಾದರೆ ಮಾತ್ರ ಲೇಖಕರ ಪುಸ್ತಕ ಕೊಡುವುದಾಗಿ ಸಾಹಿತಿಗಳು ಮತ್ತು ಲೇಖಕರೆಲ್ಲರೂ ಒಟ್ಟಾಗಿ ಷರತ್ತು ವಿಧಿಸಿದೆವು. ಆಗ, ತಮ್ಮ ‘ಪೂರ್ಣ ಸೂರ್ಯಗ್ರಹಣ’ ಪುಸ್ತಕವನ್ನು ವಾಪಸ್‌ ಪಡೆದು, ಸಾಹಿತಿಗಳ ನಿಲುವು ಬೆಂಬಲಿಸಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು ಚಿಮೂ.
–ಪಿ.ವಿ. ನಾರಾಯಣ, ವಿದ್ವಾಂಸ

**
ಕನ್ನಡಕ್ಕೆ ಚಿಮೂ ಕೊಡುಗೆ ಅನನ್ಯ
ಕನ್ನಡ ಚಳವಳಿಗೆ ಅ.ನ.ಕೃ ಮತ್ತು ವಾಟಾಳ್‌ ನಾಗರಾಜ್‌ ಒಂದೊಂದು ಸ್ವರೂಪ ನೀಡಿದರೆ, ಅದನ್ನು ಇನ್ನೊಂದು ಆಯಾಮಕ್ಕೆ ಕೊಂಡೊಯ್ದವರು ಚಿಮೂ. ವಿದ್ಯಾರ್ಥಿಗಳಲ್ಲಿ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಅಧ್ಯಾಪಕ ಅವರು. ನಾನು ಸಹ ಅವರ ವಿದ್ಯಾರ್ಥಿಯಾಗಿದ್ದೆ. ದೇಶದ ರಾಜಕೀಯ ಬಣ್ಣ ಬದಲಾದಂತೆ ಕೆಲವರ ನಿಲುವುಗಳೂ ಬದಲಾದವು. ಹಾಗೆಯೇ ಚಿಮೂ ಅವರ ನಿಲುವು ಸಹ ಬದಲಾಯಿತು. ಅವರ ವಿಚಾರಧಾರೆಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳಿವೆ. ಆದರೆ, ಅವರಷ್ಟು ನಿಷ್ಕಪಟಿ, ನಿಸ್ಪೃಹ, ಪ್ರಾಮಾಣಿಕ ಹಾಗೂ ಸರಳಜೀವಿಯನ್ನು ಹುಡುಕುವುದು ಬಹಳ ಕಷ್ಟ. ಅಧಿಕಾರ ಸ್ಥಾನಕ್ಕೆ ಯಾವತ್ತೂ ಅವರು ಆಸೆಪಡಲಿಲ್ಲ. ಸಂಶೋಧಕರಾಗಿ ಮಾಡಿರುವ ಕೆಲಸ ಮತ್ತು ಕನ್ನಡ ಚಳವಳಿಗೆ ನೀಡಿದ ಕೊಡುಗೆ ಅನನ್ಯ.
–ಡಾ.ಎಚ್‌.ಎಸ್‌. ರಾಘವೇಂದ್ರ ರಾವ್‌, ವಿಮರ್ಶಕ

**
ಸಂಶೋಧಕಗುರು
ಚಿದಾನಂದಮೂರ್ತಿಯವರು ನನ್ನ ನೇರವಾದ ಗುರುಗಳಲ್ಲ, ಆದರೆ ನನ್ನ ಚಿಂತನೆ ಮತ್ತು ತಿಳಿವಳಿಕೆಯನ್ನು ಬೆಳೆಸಿದವರು. ವಸ್ತುನಿಷ್ಠವಾಗಿ ಆಕರಗಳನ್ನು ಇಟ್ಟು ಕೊಂಡು ಸಂಶೋಧನೆ ಮಾಡುವ ವಿಧಾನವನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟವರು. ವಿದ್ವಾಂಸರ ಹಿರಿಯ ತಲೆಮಾರು ಕಣ್ಮರೆಯಾಗುತ್ತಿದ್ದಂತೆ ವಿದ್ವತ್ತಿನ ಕ್ಷೇತ್ರದಲ್ಲಿ ಒಂದು ದೊಡ್ಡ ಶೂನ್ಯ ಉಳಿಯಿತು ಎಂದು ನನಗೆ ಅನಿಸುತ್ತದೆ.
–ಓ.ಎಲ್‌. ನಾಗಭೂಷಣಸ್ವಾಮಿ, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.