ಬೆಂಗಳೂರು: ಕೇಂದ್ರದ ಮಾಜಿ ಸಚಿವ ಎಂ. ವಿ. ರಾಜಶೇಖರನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜಶೇಖರನ್ ನಿಧನ ಅತ್ಯಂತ ದುಃಖದ ಸಂಗತಿ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬ ವರ್ಗ, ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಶೋಕ ಸಂದೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪತಿಳಿಸಿದ್ದಾರೆ.
ಎಂ.ವಿ. ರಾಜಶೇಖರನ್ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ನಾಯಕರಲ್ಲಿ ಒಬ್ಬರು. ಪಕ್ಷಕ್ಕೆ ಅವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯ ಸಭೆಯ ಸದಸ್ಯರಾಗಿದ್ದ ಅವರ ಪಕ್ಷನಿಷ್ಠೆ ಆದರ್ಶನೀಯ.ಅವರು ಪಕ್ಷದ ಶಿಸ್ತಿನ ಸಿಪಾಯಿ. ಜೀವನದಲ್ಲೂ ಬಹಳ ಶಿಸ್ತು ಬದ್ಧರಾಗಿದ್ದರು. ಪ್ರತಿಯೊಬ್ಬರ ಜತೆಗೂ ಸ್ನೇಹದಿಂದ ಬೆರೆಯುತ್ತಿದ್ದರು. ಅಜಾತಶತ್ರುವಾಗಿ ಬದುಕಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಮರಿಸಿದ್ದಾರೆ.
ನನ್ನನ್ನು ಆತ್ಮೀಯವಾಗಿ ಪ್ರೀತಿಸುತ್ತಿದ್ದ ಆತ್ಮ...ನಾನು ಅವರಿಗೆ ಕರೆಮಾಡಿ ಅವರ ಮನೆಯವರು ಎಂದು ಭಾವಿಸಿ ಸಾಹೇಬರಿಗೆ ಕೊಡಿ ಎಂದಾಗ ಮುಗ್ಧರಂತೆ ನಾನೆ ಜಗ್ಗೇಶ್ ಅನ್ನುತ್ತಿದ್ದರು! ನಿಮ್ಮ ಅಗಲಿಕೆ ದುಃಖಿತರಲ್ಲಿ ನಾನು ಒಬ್ಬ! ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯನಾಯಕ ಎಂ.ವಿ.ರಾಜಶೇಖರನ್ ನಿಧನದಿಂದ ನಾವು ಒಬ್ಬ ಅನುಭವಿ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರಾಗಿ, ಶಾಸಕ-ಸಂಸದರಾಗಿ,ಕೇಂದ್ರ ಸಚಿವರಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಅವರ ಅಗಲಿಕೆಯ ದು:ಖದಲ್ಲಿರುವ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳುಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.