ಶಾಸಕ ಕಂದಕೂರ ಅವರು ಸದನದಲ್ಲಿ
ಅಬ್ಬರಿಸಿ ಬೊಬ್ಬಿರಿದ ಕಂದಕೂರ
‘ಅನಗತ್ಯವಾಗಿ ಚರ್ಚೆ ಮಾಡಬೇಡಿ, ಮಸೂದೆಗೆ ಸೀಮಿತವಾಗಿ ಅಭಿಪ್ರಾಯ ತಿಳಿಸಿ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ನೀಡಿದ ಸಲಹೆಗೆ ಜೆಡಿಎಸ್‌ನ ಶರಣಗೌಡ ಕಂದಕೂರ ಕೆರಳಿ ಕೆಂಡವಾದರು. ರೋಷಾವೇಶದಿಂದ ಬೊಬ್ಬಿರಿದ ಕಂದಕೂರ, ಕಲಾಪದಿಂದ ಹೊರ ನಡೆಯಲು ಮುಂದಾದ ಪ್ರಸಂಗವೂ ವಿಧಾನಸಭೆಯಲ್ಲಿ ನಡೆಯಿತು.
ಜನಸಂದಣಿ ನಿಯಂತ್ರಣ ಮಸೂದೆಯ ಚರ್ಚೆಯ ವೇಳೆ ಕಂದಕೂರ, ಈ ಮಸೂದೆಯಿಂದ ಉತ್ತರ ಕರ್ನಾಟಕ ಭಾಗದ ಜಾತ್ರೆಗಳಿಗೆ ಯಾವ ರೀತಿ ಅಡಚಣೆ ಆಗಲಿದೆ ಎಂದು ವಿವರಿಸಿದರು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ‘ಭಾಷಣ ಮಾಡಬೇಡಿ. ಬೇರೆಯವರಿಗೂ ಮಾತನಾಡಲು ಅವಕಾಶ ನೀಡಬೇಕು’ ಎಂದು ತಿಳಿ ಹೇಳಿದರು.
ಆಗ ಕಂದಕೂರ, ‘ನನಗೆ ಪ್ರತಿ ಬಾರಿ ಅಡಿಪಡಿಸಲಾಗುತ್ತಿದೆ. ನನ್ನನ್ನೇ ಗುರಿ ಮಾಡುತ್ತಿದ್ದೀರಿ. ಮಾತನಾಡುವುದು ಬೇಡ ಎಂದಾದರೆ ಹೊರಹೋಗುತ್ತೇನೆ’ ಎಂದು ಸಿಡಿಮಿಡಿಗೊಂಡರು. ಆಗ ಸಭಾಧ್ಯಕ್ಷರು, ‘ಮನೆಗೆ ಹೋಗುವುದಾದರೆ ಹೋಗಿ’ ಎಂದರು. ಕಾವೇರಿದ ಸನ್ನಿವೇಶ ಸೃಷ್ಟಿಯಾಯಿತು.
ಕಂದಕೂರ, ‘ನಾನು ಮಾತನಾಡಿದ್ದು ತಪ್ಪೇ‘ ಎಂದು ಕಾನೂನು ಸಚಿವರ ಅಭಿಪ್ರಾಯ ಕೇಳಿದರು. ಪ್ರತಿಕ್ರಿಯಿಸಿದ ಎಚ್. ಕೆ. ಪಾಟೀಲ, ‘ನೀವು ಆರಂಭದಲ್ಲಿ ಮಾತನಾಡಿದ್ದು ಸರಿ ಇತ್ತು. ನಂತರದ ಮಾತುಗಳು ಸರಿ ಇಲ್ಲ’ ಎಂದರು. ‘ನೀವುಗಳು ಉತ್ತಮ ಸಂಸದೀಯ ಪಟುಗಳಾಗಬೇಕು. ಸಹನೆ, ಸಂಯಮ ರೂಢಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
‘ಸಭಾಧ್ಯಕ್ಷರಿಗೂ ತಾಳ್ಮೆ ಬೇಕು. ಹೊರ ಹೋಗುತ್ತೇನೆ ಎಂದ ತಕ್ಷಣ ಹೋಗಿ ಎನ್ನುವುದು ಪೀಠದಿಂದ ಹೇಳುವ ಮಾತಲ್ಲ’ ಎಂದು ಬಿಜೆಪಿಯ ಸಿ.ಸಿ. ಪಾಟೀಲ ಹೇಳಿದರು.
ಬಸನಗೌಡ ಪಾಟೀಲ ಯತ್ನಾಳ, ‘ಸಭಾಧ್ಯಕ್ಷರು ತಾಳ್ಮೆ ಕಳೆದುಕೊಳ್ಳಬಾರದು. ಕಡಿಮೆ ಮಾತನಾಡಬೇಕು. ಬೇಗ ಮುಗಿಸಿ ಎಂದು ಒತ್ತಡ ಹಾಕಿದರೆ ಹೇಳಬೇಕಾದ ಅಭಿಪ್ರಾಯಗಳೇ ಮರೆತು ಹೋಗುತ್ತವೆ’ ಎಂದರು.
ಕಂದಕೂರ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಬಿಜೆಪಿ, ಜೆಡಿಎಸ್ ಶಾಸಕರು ಮನವಿ ಮಾಡಿದರು. ಸಭಾಧ್ಯಕ್ಷರು ಅನುಮತಿ ನೀಡಿದರು.
ಅಭಿಮಾನದ ಬಗ್ಗೆ ಎಚ್ಚರ
ವಿಧಾನ ಪರಿಷತ್ತಿನಲ್ಲಿ ಅಗ್ನಿಶಾಮಕ ದಳ ಮಸೂದೆಯ ಮೇಲಿನ ಚರ್ಚೆಯ ವೇಳೆ ಗೃಹ ಸಚಿವ ಜಿ.ಪರಮೇಶ್ವರ ಅವರು, ‘17 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದರು. ಬಿಜೆಪಿಯ ಕೇಶವ ಪ್ರಸಾದ್ ಅವರು, ‘16 ಬಜೆಟ್’ ಎಂದು ಸರಿಪಡಿಸಿದರು.
ಆಗ ಪರಮೇಶ್ವರ ಅವರು, ‘ಹೌದು ಸರಿಪಡಿಸಿಕೊಂಡೆ. 16 ಬಜೆಟ್’ ಎಂದು ಸಿದ್ದರಾಮಯ್ಯ ಅವರತ್ತ ನೋಡಿದರು. ವಿರೋಧ ಪಕ್ಷಗಳ ಕೆಲ ಸದಸ್ಯರು, ‘ಕೇಶವ ಅವರದ್ದು ಅಭಿಮಾನದ ಮಾತು’ ಎಂದರು. ಪ್ರತಿಯಾಗಿ ಪರಮೇಶ್ವರ, ‘ಹೌದು ಅವರು ಬಹಳ ಒಳ್ಳೆಯವರು. ಅವರು ಅಭಿಮಾನದಿಂದಲೇ ಹೇಳಿದ್ದು’ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಮಧ್ಯ ಪ್ರವೇಶಿಸಿ, ‘ಅವರ ಅಭಿಮಾನದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ’ ಎಂದು ಕಾಲೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.