ADVERTISEMENT

ಕೆಎಸ್‌ಡಿಎಲ್‌ನಿಂದ ನೂರಾರು ಕೋಟಿ ಲೂಟಿ? ತನಿಖಾ ತಂಡಕ್ಕೆ ಮಾಡಾಳ್‌ ಅಕ್ರಮದ ಸುಳಿವು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 0:30 IST
Last Updated 5 ಮಾರ್ಚ್ 2023, 0:30 IST
   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌)ವು ಕಚ್ಚಾ ವಸ್ತುಗಳ ಖರೀದಿಗಾಗಿ ವ್ಯಯಿಸಿದ ನೂರಾರು ಕೋಟಿ ರೂಪಾಯಿ ಮಾರ್ಗ ಬದಲಿಸಿ ಕಾರ್ಖಾನೆಯ ಅಧ್ಯಕ್ಷರಾಗಿದ್ದ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಅವರ ಕುಟುಂಬದ ಕೈ ಸೇರಿರುವ ಸುಳಿವು ಲೋಕಾಯುಕ್ತ ಪೊಲೀಸರಿಗೆ ಲಭಿಸಿದೆ.

2020ರ ಜುಲೈನಲ್ಲಿ ವಿರೂಪಾಕ್ಷಪ್ಪ ಅವರನ್ನು ಕೆಎಸ್‌ಡಿಎಲ್‌ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಎರಡು ವರ್ಷ ಏಳು ತಿಂಗಳ ಕಾಲ ಅಧ್ಯಕ್ಷ ಸ್ಥಾನದಲ್ಲಿದ್ದ ಅವರು ₹ 700 ಕೋಟಿಗೂ ಹೆಚ್ಚು ಮೊತ್ತದ ಕಚ್ಚಾ ವಸ್ತುಗಳ ಖರೀದಿಯ ಟೆಂಡರ್‌ಗಳನ್ನು ಅಂತಿಮಗೊಳಿಸಿದ್ದರು. ಬಹುತೇಕ ಟೆಂಡರ್‌ಗಳಲ್ಲಿ ದುಪ್ಪಟ್ಟು ದರ ನಿಗದಿಯಾಗಿದ್ದು, ಬೆಂಗಳೂರಿನ ಒಂದು ಕಂಪನಿಗೆ ಆದ್ಯತೆ ನೀಡಿರುವುದನ್ನು ತನಿಖಾ ತಂಡವು ಕೆಎಸ್‌ಡಿಎಲ್‌ ಕೇಂದ್ರ ಕಚೇರಿಯಿಂದ ವಶಕ್ಕೆ ಪಡೆದಿರುವ ದಾಖಲೆಗಳ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಲೋಕಾಯುಕ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಸಾಯನಿಕ ಪೂರೈಕೆ ಟೆಂಡರ್‌ನಲ್ಲಿ ಖರೀದಿ ಆದೇಶ ನೀಡಿರುವುದಕ್ಕಾಗಿ ಶ್ರೇಯಸ್‌ ಕಶ್ಯಪ್‌ ಎಂಬ ಗುತ್ತಿಗೆದಾರರಿಂದ ತಂದೆ ವಿರೂ‍ಪಾಕ್ಷಪ್ಪ ಪರವಾಗಿ ₹ 40 ಲಕ್ಷ ಲಂಚ ಪಡೆಯುತ್ತಿದ್ದ ಪ್ರಶಾಂತ್‌ ಮಾಡಾಳ್‌ ಅವರನ್ನು ಗುರುವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಅದೇ ಸಂದರ್ಭದಲ್ಲಿ₹ 1.62 ಕೋಟಿ ಲಂಚ ನೀಡಲು ಬಂದಿದ್ದ ಕರ್ನಾಟಕ ಅರೋಮಾಸ್‌ ಕಂಪನಿಯ ಇಬ್ಬರು ನೌಕರರು ಮತ್ತು ಒಬ್ಬ ಮಧ್ಯವರ್ತಿಯನ್ನು ಬಂಧಿಸಲಾಗಿತ್ತು.

ADVERTISEMENT

‘ಒಂದೇ ಕಾಲ್‌ನಲ್ಲಿ ಎಲ್ಲವನ್ನೂ ಸೆಟ್ಲ್‌ ಮಾಡುವೆ!’

ಗುರುವಾರ ಸಂಜೆ ಕ್ರೆಸೆಂಟ್‌ ರಸ್ತೆಯ ಖಾಸಗಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧಿತರಾದ ಬೆಂಗಳೂರು ಜಲಮಂಡಳಿಯ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌, ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಒಂದೇ ಒಂದು ದೂರವಾಣಿ ಕರೆಮಾಡಲು ಅವಕಾಶ ಕೊಡುವಂತೆ ತನಿಖಾ ತಂಡದಲ್ಲಿದ್ದ ಪೊಲೀಸ್‌ ಅಧಿಕಾರಿಗಳನ್ನು ಕೇಳಿಕೊಂಡಿದ್ದರು.

‘ಪ್ಲೀಸ್‌ ಮೊಬೈಲ್‌ನಲ್ಲಿ ಒಂದು ಕಾಲ್‌ ಮಾಡಲು ಅವಕಾಶ ಕೊಡಿ. ಎಲ್ಲವನ್ನೂ ಸೆಟ್ಲ್‌ ಮಾಡಿ ಮುಗಿಸುತ್ತೇನೆ’ ಎಂದು ಪ್ರಶಾಂತ್‌ ದುಂಬಾಲು ಬಿದ್ದಿದ್ದರು. ಯಾವುದಕ್ಕೂ ಜಗ್ಗದ ಲೋಕಾಯುಕ್ತ ಎಸ್‌ಪಿ ಕೆ.ವಿ. ಅಶೋಕ್‌, ತನಿಖೆಗೆ ಸಹಕರಿಸುವಂತೆ ತಾಕೀತು ಮಾಡಿದ್ದರು. ಆರೋಪಿಯ ಮಾತಿಗೆ ಮಣೆಹಾಕದೆ ಬಂಧನದ ಪ್ರಕ್ರಿಯೆ ಪೂರ್ಣಗೊಳಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮತ್ತೆ ವಶಕ್ಕೆ ಪಡೆಯಲು ಸಿದ್ಧತೆ

ಹೆಚ್ಚಿನ ತನಿಖೆಗಾಗಿ ಪ್ರಶಾಂತ್ ಮಾಡಾಳ್‌, ಮಧ್ಯವರ್ತಿ ಸಿದ್ದೇಶ್‌ ಹಾಗೂ ಕರ್ನಾಟಕ ಅರೋಮಾಸ್‌ ಕಂಪನಿ ನೌಕರರಾದ ಆಲ್ಬರ್ಟ್‌ ನಿಕೋಲಸ್‌ ಮತ್ತು ಗಂಗಾಧರ್‌ ಅವರನ್ನು ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ಸೋಮವಾರ ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಕರ್ನಾಟಕ ಅರೋಮಾಸ್‌ ಕಂಪನಿಯಿಂದ ₹ 1.62 ಕೋಟಿ ಪಡೆದಿರುವ ಕುರಿತು ವಿಚಾರಣೆ ನಡೆಸಬೇಕಿದೆ. ಗುರುವಾರ ಪ್ರಶಾಂತ್‌ ಬ್ಯಾಂಕ್‌ ಖಾತೆಯೊಂದಕ್ಕೆ ₹ 94 ಲಕ್ಷ ಜಮಾ ಮಾಡಿರುವ ಕುರಿತ ರಸೀದಿ ಸಿಕ್ಕಿದೆ. ಆ ಬಗ್ಗೆಯೂ ಮಾಹಿತಿ ನೀಡಿಲ್ಲ. ವಿರೂಪಾಕ್ಷಪ್ಪ ಮಾಡಾಳ್‌ ಮನೆಯಲ್ಲಿ ₹ 6.10 ಕೋಟಿ ನಗದು ಪತ್ತೆಯಾಗಿರುವ ಕುರಿತೂ ಪ್ರಶ್ನಿಸಬೇಕಿದೆ. ಈ ಕಾರಣಕ್ಕಾಗಿ ಕೆಲವು ದಿನಗಳ ಕಾಲ ಆರೋಪಿಗಳನ್ನು ತನಿಖಾ ತಂಡದ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.