ಬೆಂಗಳೂರು: ಮದ್ದೂರು ಗಲಭೆಗೆ ಸಂಬಂಧಿಸಿದಂತೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ನೇತೃತ್ವದಲ್ಲಿ ಸತ್ಯಶೋಧನಾ ತಂಡ ರಚಿಸಿದ್ದು, ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ನೀಡಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮದ್ದೂರಿನಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ. ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆದಿದೆ. ನಿಜಾಮರ ಆಡಳಿತವನ್ನು ನೆನಪು ಮಾಡಿಕೊಡುತ್ತಿದೆ ಎಂದು ಟೀಕಿಸಿದರು.
‘ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಮ್ಮ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ರಾಜ್ಯದಲ್ಲಿ ಕಾನೂನು– ಸುವ್ಯವಸ್ಥೆ ಹದಗೆಡುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಗಣಪತಿ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ನರ್ತಿಸಿದ ಪಿಎಸ್‌ಐ ಒಬ್ಬರನ್ನು ಅಮಾನತು ಮಾಡಿದ ಸುದ್ದಿ ಇದೆ. ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ’ ಎಂದು ಅವರು ಪ್ರಶ್ನಿಸಿದರು.
‘ಮುಖ್ಯಮಂತ್ರಿಗಳು ತಮ್ಮ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ. ಇವರ ಸಲಹೆಯಿಂದಾಗಿ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ನಡೆದಿದೆ. ಇದರ ಪರಿಣಾಮ ಹಿಂದೂಗಳು ಗಣಪತಿ ಹಬ್ಬ ಸೇರಿದಂತೆ ಯಾವುದೇ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಜಯೇಂದ್ರ ಟೀಕಿಸಿದರು.
‘ರಾಜ್ಯದಲ್ಲಿ ಆರ್‌ಎಸ್ಎಸ್, ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರನ್ನು ತಡೆಯಲು ಇವರು ಯಾರು? ಚಾಮುಂಡಿ ಬೆಟ್ಟಕ್ಕೆ, ಧರ್ಮಸ್ಥಳಕ್ಕೆ ಅಥವಾ ಗಣಪತಿ ಮೆರವಣಿಗೆ ತಡೆಯಲು ಇವರು ಯಾರು? ತಾಕತ್ತಿದ್ದರೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವವರನ್ನು ಒದ್ದು ಒಳಗೆ ಹಾಕಲಿ. ಇಲ್ಲವೇ, ಕಾಂಗ್ರೆಸ್ ಸರ್ಕಾರ ಹಿಂದೂಗಳ ಪರ ಇಲ್ಲ ಎಂಬುದನ್ನು ಬಹಿರಂಗವಾಗಿ ಘೋಷಿಸಲಿ’ ಎಂದು ಅವರು ಸವಾಲು ಹಾಕಿದರು.
‘ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಇತರ ನಾಯಕರ ಜತೆ ಬುಧವಾರ ಬೆಳಿಗ್ಗೆ ಮದ್ದೂರಿಗೆ ಭೇಟಿ ನೀಡಲಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.