ADVERTISEMENT

ನಾನು ನಿಷ್ಕ್ರಿಯ ಪಕ್ಷದ ನಾಯಕ: ಕುಮಾರಸ್ವಾಮಿಗೆ ಮಧು ಬಂಗಾರಪ್ಪ ತಿರುಗೇಟು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:03 IST
Last Updated 2 ಮಾರ್ಚ್ 2020, 19:03 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಬೆಂಗಳೂರು: ‘ನಾನು ನಿಷ್ಕ್ರಿಯ ಪಕ್ಷದ ನಾಯಕ’ ಎಂದು ತಮ್ಮನ್ನು ಬಣ್ಣಿಸಿಕೊಂಡ ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ, ‘ನಾನಾಗಿ ಹುದ್ದೆಗೆರಾಜೀನಾಮೆ ಕೊಡುವುದಿಲ್ಲ. ಬೇಕಾದರೆ ಅವರೇ ನನ್ನ ರಾಜೀನಾಮೆ ಕೇಳಬಹುದು. ಇಲ್ಲ‌ವೇ ನನ್ನನ್ನು ಹುದ್ದೆಯಿಂದ ತೆಗೆಯಬಹುದು’ ಎಂದು ಪಕ್ಷದ ನಾಯಕರಿಗೆ ತಿರುಗೇಟು ಕೊಟ್ಟರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ಅವರು, ‘ಪಕ್ಷದ ನಾಯಕರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಗೊಂದಲ ಬಗೆಹರಿಸಲು ಮುಂದಾಗದಿದ್ದರೆ ಮುಂದೆ ದೊಡ್ಡ ಮಟ್ಟದ ಅನಾಹುತ ಆಗಬಹುದು’ ಎಂದು ಎಚ್ಚರಿಕೆ ನೀಡಿದರು.

‘ಪಕ್ಷ ಬಿಟ್ಟು ಹೋಗಿ ಏನನ್ನೊ ಸಾಧನೆ ಮಾಡುತ್ತೇನೆ ಎನ್ನುವವರು ಹೋಗಿ ಸಾಧನೆ ಮಾಡಲಿ. ನಾನು ಎಷ್ಟು ಬಾರಿ ಅವರೊಂದಿಗೆ ಮಾತನಾಡಲಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಪರೋಕ್ಷವಾಗಿ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ADVERTISEMENT

‘ಆದರೆ, ನಾನು ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ. ಎಚ್. ವಿಶ್ವನಾಥ್ ಅವರು ಪಕ್ಷ ಬಿಡುವಾಗ ಅವರೊಂದಿಗಿದ್ದು ಮನವೊಲಿಸುವ ಪ್ರಯತ್ನ ಮಾಡಿದ್ದೆ. ಪಕ್ಷ ತೊರೆಯುವ ಸಂದರ್ಭ ಅವರಿಗೆ ಏಕೆ ಬಂತು ಗೊತ್ತಿಲ್ಲ. ಆದರೆ, ವಿಶ್ವನಾಥ್ ಹಾಗೂ ಕುಮಾರಸ್ವಾಮಿ ಮಧ್ಯೆ ಒಡಕು ತಂದಿಡುವ ಪ್ರಯತ್ನವನ್ನು ಪಕ್ಷದಲ್ಲಿಯೇ ಕೆಲವರು ಮಾಡಿದ್ದರು’ ಎಂದು ಗಂಭೀರ ಆರೋಪ ಮಾಡಿದರು.

‘ಲೋಕಸಭಾ ಚುನಾವಣೆ ಬಳಿಕ ‌ನಾನು ಮಾಧ್ಯಮಗಳಿಂದ ದೂರ ಉಳಿದೆ. ಇದು ಪಕ್ಷದ ಕಾರಣಕ್ಕಾಗಿ ಅಲ್ಲ. ವೈಯಕ್ತಿಕ ಕಾರಣಕ್ಕೆ. ನನ್ನ ಮನಸ್ಸಿಗೆ ನೋವಾಗಿದೆ. ಕಾರ್ಯಕರ್ತರಿಗೂ ನೋವಾಗಿದೆ. ಪಕ್ಷದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ ಇಲ್ಲದಿರುವುದು ಬೇಸರದ ಸಂಗತಿ. ಕಾರ್ಯಕರ್ತರ ವಿಶ್ವಾಸವನ್ನು ಜೆಡಿಎಸ್ ಕಳೆದುಕೊಂಡಿದೆ’ ಎಂದರು.

‘ಅಪರಾಧ ಹಿನ್ನೆಲೆ ಇರುವ ರಮೇಶಗೌಡರಂಥವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಬಾರದಿತ್ತು. ಯೋಗ್ಯತೆ ಇಲ್ಲದ ಅವರಿಗೆ ಎಂಎಲ್‌ಸಿ ಸ್ಥಾನ ನೀಡಿರುವುದು ಯಾರ ನಿರ್ಧಾರ. ಅವರಿಂದ ರಾಜೀನಾಮೆ ಪಡೆದು ಒಳ್ಳೆಯವರಿಗೆ ಕೊಡಲಿ. ಧರ್ಮೇಗೌಡ ಪಕ್ಷ ಬಿಟ್ಟು ಹೋಗಲು ಮುಂದಾಗಿದ್ದರು. ಅವರನ್ನೂ ಪರಿಷತ್‌ ಸದಸ್ಯ ಮಾಡಬಾರದಿತ್ತು’ ಎಂದು ಪಕ್ಷದ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

‘ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನದಿಂದ ಬಹಳ ದುಃಖದಿಂದಲೇ ಇಳಿದರು. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ ಅವರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ’ ಎಂದೂ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.