ADVERTISEMENT

ಎಸ್‌ಎಸ್‌ಎಲ್‌ಸಿ, ಪಿಯು ತೇರ್ಗಡೆಗೆ ಕನಿಷ್ಠ ಅಂಕ 33ಕ್ಕೆ ನಿಗದಿ: ಮಧು ಬಂಗಾರಪ್ಪ

2025–2026ನೇ ಸಾಲಿನ ಪರೀಕ್ಷೆಗಳಿಂದಲೇ ಹೊಸ ನಿಯಮ ಅನ್ವಯ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 15:53 IST
Last Updated 15 ಅಕ್ಟೋಬರ್ 2025, 15:53 IST
ಮಧು ಎಸ್.ಬಂಗಾರಪ್ಪ
ಮಧು ಎಸ್.ಬಂಗಾರಪ್ಪ   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಬೇಕಿರುವ ಕನಿಷ್ಠ ಅಂಕವನ್ನು ಶೇ 33ಕ್ಕೆ ನಿಗದಿ ಮಾಡಲಾಗಿದ್ದು, ಈ ನಿಯಮ 2025–26ನೇ ಶೈಕ್ಷಣಿಕ ಸಾಲಿನಿಂದಲೇ ಹೊಸ, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. 

ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಜ್ಯದಲ್ಲಿ ತೇರ್ಗಡೆಯಾಗಲು ಪ್ರತಿ ವಿದ್ಯಾರ್ಥಿ ಶೇ 35ರಷ್ಟು ಅಂಕ ಪಡೆಯಬೇಕು ಎಂಬ ನಿಯಮವಿದೆ. ಸಿಬಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಹಾಗೂ ನೆರೆಯ ರಾಜ್ಯಗಳಲ್ಲಿ ತೇರ್ಗಡೆಯಾಗಲು ಕನಿಷ್ಠ ಅಂಕ ಶೇ 33 ಇದೆ. ಈ ತಾರತಮ್ಯ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ–2 ಸಹ ಶಿಫಾರಸು ಮಾಡಿತ್ತು. ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣವನ್ನು ಹೆಚ್ಚಿಲು, ಕೇಂದ್ರ ಹಾಗೂ ನೆರೆಯ ರಾಜ್ಯಗಳ ಉತ್ತೀರ್ಣತಾ ಮಾನದಂಡವನ್ನು ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳಿಗೂ ಅನ್ವಯ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ವಿವರ ನೀಡಿದರು.

ADVERTISEMENT

ಏಕರೂಪದ ಪರೀಕ್ಷಾ ಪದ್ಧತಿ ಜಾರಿಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೊರಡಿಸಿದ್ದ ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಕರಡು ಅಧಿಸೂಚನೆ ಪರವಾಗಿ 701 ಹಾಗೂ ವಿರುದ್ಧವಾಗಿ ಎಂಟು ಪತ್ರಗಳು ಸಲ್ಲಿಕೆಯಾಗಿವೆ. ವಾರದ ಒಳಗೆ ಅಂತಿಮ ಅಧಿಸೂಚನೆ ಹೊರಬೀಳಲಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಆಂತರಿಕ ಮತ್ತು ಬಾಹ್ಯ ಪರೀಕ್ಷೆ ಸೇರಿ ತೇರ್ಗಡೆಗೆ ಒಟ್ಟಾರೆ ಶೇ 33 ಅಂಕ ಪಡೆಯಬೇಕು. ಎಲ್ಲ ವಿಷಯಗಳಿಂದ 206 ಅಂಕ ಪಡೆದವರು ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕ ಪಡೆದರೆ ಸಾಕು, ಉತ್ತೀರ್ಣರಾಗುತ್ತಾರೆ. ಪಿಯು ವಿದ್ಯಾರ್ಥಿಗಳು ಪ್ರತಿ ವಿಷಯದ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕ ಪಡೆದು ಒಟ್ಟಾರೆ ಶೇ 33 ಅಂಕ ಗಳಿಸಬೇಕು ಎಂದರು.

18000 ಶಿಕ್ಷಕರ ನೇಮಕಾತಿಗೆ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ತ್ವರಿತವಾಗಿ ಸಿಇಟಿ ನಡೆಸಿ ಬರುವ ಶೈಕ್ಷಣಿಕ ವರ್ಷದ ಒಳಗೆ ನೇಮಕಾತಿ ಆದೇಶ ನೀಡಲಾಗುವುದು
  ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ

ಕೆಪಿಎಸ್‌: ನವೆಂಬರ್‌ನಿಂದಲೇ ದಾಖಲಾತಿ

ಕರ್ನಾಟಕ ಪಬ್ಲಿಕ್‌ ಶಾಲೆಗಳೂ (ಕೆಪಿಎಸ್‌) ಸೇರಿದಂತೆ ರಾಜ್ಯದ ಸರ್ಕಾರಿ ಶಾಲೆಗಳ 2026–27ನೇ ಸಾಲಿನ ದಾಖಲಾತಿ ಪ್ರಕ್ರಿಯೆಯನ್ನು ಬರುವ ನವೆಂಬರ್‌ನಿಂದಲೇ ಆರಂಭಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ರಾಜ್ಯದಲ್ಲಿ ಪ್ರಸ್ತುತ 308 ಕೆಪಿಎಸ್‌ ಶಾಲೆಗಳಿವೆ. ಬಜೆಟ್‌ನಲ್ಲಿ ಘೋಷಿಸಿದ 500 ಶಾಲೆಗಳನ್ನು ಎಡಿಬಿ ಬ್ಯಾಂಕ್‌ ನೆರವಿನ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೆರವಿನಲ್ಲಿ ಆ ಭಾಗಕ್ಕೆ 200 ಶಾಲೆ ಹಾಗೂ ಗಣಿ ಬಾಧಿತ 10 ತಾಲ್ಲೂಕುಗಳಿಗೆ ತಲಾ 10ರಂತೆ 100 ಶಾಲೆಗಳನ್ನು ತೆತೆಯಲಾಗುತ್ತಿದೆ. ಒಂದೇ ವರ್ಷದಲ್ಲಿ 800 ಹೊಸ ಶಾಲೆಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.  ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ದ್ವಿಭಾಷಾ ಮಾಧ್ಯಮದ ಕಲಿಕೆಗೆ ಅವಕಾಶ ನೀಡಲಾಗಿದೆ. ಆರನೇ ತರಗತಿಯಿಂದ ವಿದ್ಯಾರ್ಥಿಗಳು ಕನ್ನಡ ಇಲ್ಲವೇ ಇಂಗ್ಲಿಷ್‌ ಭಾಷಾ ಮಾಧ್ಯಮ ಆಯ್ಕೆ ಮಾಡಿಕೊಳ್ಳಬಹುದು ಎಂದರು.

ವಾರದಲ್ಲಿ ಒಂದು ಅವಧಿ ಮೌಲ್ಯ ಶಿಕ್ಷಣ 

1ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ವಾರದಲ್ಲಿ ಒಂದು ಅವಧಿಯನ್ನು ಮೌಲ್ಯಶಿಕ್ಷಣ ಬೋಧನೆಗೆ ಮೀಸಲಿಡಲಾಗುವುದು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಅನುಭೂತಿ ಮತ್ತು ದಯೆ ಗೌರವ ಪ್ರಾಮಾಣಿಕತೆ ಮತ್ತು ಬದ್ಧತೆ ಸುಸ್ಥಿರ ಜೀವನ ಮತ್ತು ಪರಿಸರ ಜಾಗೃತಿ ನಾಗರಿಕ ಜವಾಬ್ದಾರಿ ವೈವಿಧ್ಯ ಸಮಾನತೆ ವೈಜ್ಞಾನಿಕ ಮನೋಭಾವ ಸುರಕ್ಷತೆ ಲಿಂಗ ಸಮಾನತೆ ಮೊದಲಾದ ವಿಷಯ ಒಳಗೊಂಡ 10 ಪುಸ್ತಕಗಳನ್ನು ಸಿದ್ಧಪಡಿಸಿದೆ. ಮೂಲ ಮೌಲ್ಯಗಳು ಮತ್ತು ಉಪ ಮೌಲ್ಯಗಳಿಗೆ ಅನುಗುಣವಾಗಿ ಪಠ್ಯ ಚಟುವಟಿಕೆ ಸಿದ್ಧಪಡಿಸಲಾಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.