
ಬೆಂಗಳೂರು: ‘ದಕ್ಷಿಣದ ರಾಜ್ಯಗಳಲ್ಲಿರುವ ಮಾದಿಗ ಸಮುದಾಯವನ್ನು ಒಗ್ಗೂಡಿಸಿ ಶ್ರೀ ಮಾದಾರ ಚೆನ್ನಯ್ಯರವರ 956ನೇ ಜಯಂತ್ಯುತ್ಸವವನ್ನು ನಗರದ ಅರಮನೆ ಮೈದಾನದಲ್ಲಿ ಡಿ. 6 ಮತ್ತು 7ರಂದು ಆಯೋಜಿಸಲಾಗುವುದು’ ಎಂದು ಕರ್ನಾಟಕ ಮಾದರ ಮಹಾಸಭಾದ ಅಧ್ಯಕ್ಷರೂ ಆಗಿರುವ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಭಾನುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಮಾದರ ಮಹಾಸಭಾ ಮತ್ತು ಕರ್ನಾಟಕ ಮಾತಂಗ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಆದಿ ಜಾಂಬವ, ಮಾದಾರ ಚೆನ್ನಯ್ಯ, ಮಾತಂಗ ಮಾತ, ಮಾತಂಗ ಮುನಿ ಮುಂತಾದ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
‘ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಕೇರಳ ರಾಜ್ಯಗಳ ರಾಜಕೀಯ ನಾಯಕರು, ಹಿರಿಯ ಸಾಹಿತಿಗಳು, ಚಿಂತಕರು, ಸಾಂಸ್ಕೃತಿಕ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು’ ಎಂದರು.
‘ಮಾದರ, ಮಾದಿಗ, ಮಾತಂಗ, ಅರುಂದತಿಯಾರ್, ಭಂಗಿ, ಜಾಂಬ , ಬಾಂಬಿ, ಹರಳಯ್ಯ, ಮೆಹತಾರ್, ಚಮ್ಮಾರ್, ಚಂಬಾರ್, ಚಮಗಾರ್, ಮಾಚಾಲ, ಚಮಗಾರ್, ರೋಹಿದಸ್, ಸಮಗಾರ್ ಇನ್ನೂ ಮುಂತಾದ 29 ಉಪಜಾತಿಗಳ ಎಲ್ಲ ಮಾದಿಗ ಸಮುದಾಯದ ಜನಸಂಖ್ಯೆಯು ಒಕ್ಕಲಿಗ, ಲಿಂಗಾಯತ, ವೀರಶೈವ, ಬ್ರಾಹ್ಮಣ, ಕುರುಬ ಹಾಗೂ ಎಲ್ಲಾ ಜಾತಿಗಳ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಆದರೆ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಿಗಬೇಕಾದ ಸಾಮಾಜಿಕ ನ್ಯಾಯ ಇನ್ನೂ ಸಿಕ್ಕಿಲ್ಲ’ ಎಂದರು.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಆದಿ ಜಾಂಬವ ಮಠ ಷಡಕ್ಷರ ಮುನಿ ಸ್ವಾಮೀಜಿ, ಹಂಪಿ ಮಾತಂಗ ಮಠದ ಭಾರತಿ ಪೂರ್ಣಾನಂದ ಸ್ವಾಮೀಜಿ, ಐಮಂಗಲ ಹರಳಯ್ಯ ಗುರುಪೀಠದ ಹರಳಯ್ಯ ಸ್ವಾಮೀಜಿ, ಆದಿ ಜಾಂಬವ ಮಠದ ಆನಂದ ಮುನಿ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾತಂಗ ಫೌಂಡೇಷನ್‌ನ ಅಧ್ಯಕ್ಷ ಆರ್. ಲೋಕೇಶ್ ಸಭೆಯಲ್ಲಿದ್ದರು.
ಮಾದರ ಮಾದಿಗ ಸಮುದಾಯವು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಭಾರತದ ಜನಸಂಖ್ಯೆಯಲ್ಲಿ ಶೇ 10ರಷ್ಟು ಜನಸಂಖ್ಯೆ ಹೊಂದಿದ್ದು ಸಮುದಾಯ ಒಟ್ಟಾದರೆ ಏನು ಬೇಕಾದರೂ ಸಾಧಿಸಬಹುದು
– ಕೆ.ಎಚ್. ಮುನಿಯಪ್ಪ ಅಧ್ಯಕ್ಷ ಕರ್ನಾಟಕ ಮಾದರ ಮಹಾಸಭಾ