ADVERTISEMENT

ಕಾಳುಮೆಣಸು, ಕಾಫಿಗೆ ‘ಕೊಳೆ’ ಸುಳಿ

ಮಳೆಯಿಂದ ಬೆಳೆ ಹಾನಿ l ರೋಗದ ಕುರಿತು ಸಮೀಕ್ಷೆ ನಡೆಸಲು ಕೊಡಗು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 18:11 IST
Last Updated 21 ಜುಲೈ 2022, 18:11 IST
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕು ಕುಂಚೆಬೈಲು ಗ್ರಾಮದ ತೋಟದಲ್ಲಿ ಕೊಳೆ ರೋಗ ತಗುಲಿ ಕಾಫಿ ಕಾಯಿಗಳು, ಎಲೆಗಳು ಕಪ್ಪಾಗಿರುವುದು
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕು ಕುಂಚೆಬೈಲು ಗ್ರಾಮದ ತೋಟದಲ್ಲಿ ಕೊಳೆ ರೋಗ ತಗುಲಿ ಕಾಫಿ ಕಾಯಿಗಳು, ಎಲೆಗಳು ಕಪ್ಪಾಗಿರುವುದು   

ಚಿಕ್ಕಮಗಳೂರು/ಕೊಡಗು/ಹಾಸನ: ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಗಾಳಿ, ಮಳೆ ಹಾಗೂ ತೇವಾಂಶ ಹೆಚ್ಚಿದ್ದರಿಂದ ಕಾಫಿ, ಕಾಳುಮೆಣಸು, ಏಲಕ್ಕಿಗೆ ಕೊಳೆರೋಗ ತಗುಲಿದೆ.

ಗಿಡಗಳಲ್ಲಿ ಕಾಫಿ ಕಾಯಿಗಳು ಕಪ್ಪಾಗಿದ್ದು, ಉದುರುತ್ತಿವೆ. ಎಲೆಗಳು ಕಪ್ಪಾಗಿವೆ. ಕಾಳುಮೆಣಸಿನ ಬಳ್ಳಿಗಳ ತೊಟ್ಟುಗಳು (ಕಾಯಿಕಟ್ಟುವ ಜಾಗ) ಕಪ್ಪಾಗಿ ಉದುರಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ, ತರೀಕೆರೆ (ಭಾಗಶಃ) ತಾಲ್ಲೂಕುಗಳು, ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರ ಪೇಟೆ ತಾಲ್ಲೂಕುಗಳು ಹಾಗೂ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಸಬಾ, ಬಿಕ್ಕೋಡು, ಅರೇಹಳ್ಳಿ ಹೋಬಳಿ ಭಾಗದಲ್ಲಿ ಈ ಬೆಳೆಗಳನ್ನು ಬೆಳೆಯಲಾಗಿದೆ.

ADVERTISEMENT

ಅರೇಬಿಕಾ ಮತ್ತು ರೋಬಸ್ಟ ತಳಿಗಳನ್ನು ಬೆಳೆಯಲಾಗಿದೆ. ಕಾಫಿಯ ಎರಡು ತಳಿಗಳಿಗೂ ರೋಗ ಬಾಧಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ಭಾಗದಲ್ಲಿ ಅಧಿಕ ಶೀತದ ಪರಿಣಾಮ ಬೇರಿಗೆ ಆಮ್ಲಜನಕದ ಕೊರತೆಯಾಗಿ ಕಾಫಿ ಹಸಿರುಕಾಯಿ ಉದುರುವ ‘ವೆಟ್ ಫೀಟ್‌’ ಕೂಡಾ ಬಾಧಿಸುತ್ತಿದೆ.

ಕೊಡಗು ಜಿಲ್ಲೆಯ ತೋಟಗಳಲ್ಲಿ ಕಾಫಿ ಕಾಯಿಗಳು ಅಪಾರ ಪ್ರಮಾಣದಲ್ಲಿ ಉದುರಿವೆ. ನಾಪೋಕ್ಲು ಹೋಬಳಿಯ ಕಕ್ಕಬ್ಬೆ, ಕುಂಜಿಲ, ನಾಲಡಿ, ಮರಂದೋಡ, ಮದೆನಾಡು, ಜೋಡುಪಾಲ ಮತ್ತಿತರ ಭಾಗಗಳಲ್ಲಿ ಕೊಳೆರೋಗ ಉಲ್ಬಣಿಸಿದೆ. ಶ್ರೀಮಂಗಲ, ಶನಿವಾರಸಂತೆ ಭಾಗಗಳಿಗೂ ವ್ಯಾಪಿಸಿದೆ.

ಗಿಡಗಳಿಂದ ಗೊಂಚಲು ಗೊಂಚಲಾಗಿ ಕಾಫಿಕಾಯಿಗಳು ಉದುರುತ್ತಿವೆ. ಗಿಡಗಳ ರೆಂಬೆಗಳಲ್ಲಿ ಕಾಫಿ ಕಾಯಿಗಳು ಕಪ್ಪಾಗಿ ಕೊಳೆಯುತ್ತಿವೆ. ಮಳೆ ಮುಂದುವರಿದರೆ ಮುಂದಿನ ವರ್ಷ ಇಳುವರಿಯೇ ಕೈತಪ್ಪುವ ಸಾಧ್ಯತೆ ಇದೆ ಎಂದು ಬೆಳೆಗಾರರು ಕಳವಳಗೊಂಡಿದ್ದಾರೆ.

ಪ್ರಾಥಮಿಕ ಸಮೀಕ್ಷೆ: ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕಾಫಿಗೆ ಬಂದಿರುವ ಕೊಳೆರೋಗದ ಕುರಿತು ಸಮೀಕ್ಷೆ ನಡೆಸುವಂತೆ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೂಚನೆ ನೀಡಿದ್ದಾರೆ. ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದ ವಿಜ್ಞಾನಿಗಳಾದ ಬಾ.ರಾಜೀವ್ ಪಾಟಿ, ಮುಖಾರಿಬ್, ಗೋಣಿಕೊಪ್ಪಲಿನ ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ.ಶ್ರೀದೇವಿ ಅವರು ಹುದಿಕೇರಿ, ಬೇಲೂರು, ಹೈಸೊಡ್ಲೂರು, ಪೆರಾಡು, ಪರ್ಕಟಗೇರಿ, ಬಿರುನಾಣಿ, ಬಾಡಗಕೇರಿ, ಕುರ್ಚಿ, ಬೀರುಗ, ಟಿ.ಶೆಟ್ಟಿಗೇರಿ, ತಾವಲಗೇರಿ, ಹರಿಹರ ಇತರ ಗ್ರಾಮಗಳ ತೋಟಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಕಾಫಿಗೆ ಕೊಳೆರೋಗ ಹರಡುತ್ತಿದೆ ಎಂಬುದನ್ನು ದೃಢಪಡಿಸಿದ್ದಾರೆ.

‘ಸದ್ಯ, ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಕೃಷಿ, ತೋಟಗಾರಿಕೆ, ಕಂದಾಯ, ಕಾಫಿ ಮಂಡಳಿಯಿಂದ ಜಂಟಿ ಸಮೀಕ್ಷೆ ನಡೆಸಲಾಗುವುದು. ಆಗಷ್ಟೇ ನಷ್ಟದ ಅಂದಾಜು ಸಿಗಲು ಸಾಧ್ಯ’ ಎಂದು ಗೋಣಿಕೊಪ್ಪಲಿನ ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ.ಶ್ರೀದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಳುಮೆಣಸೂ ಅಪಾಯದಲ್ಲಿ: ಕಾಳುಮೆಣಸೂ ಅಪಾಯಕ್ಕೆ ಸಿಲುಕಿದೆ. ಕೆಲವೆಡೆ ಬಳ್ಳಿಯಲ್ಲಿ ಹೂ ಬಂದಿದೆ. ಮಳೆ ನಿಲ್ಲದೇ ಹೋದರೆ ಹೂಬಿಡುವ ಸಾಧ್ಯತೆ ಕಡಿಮೆ. ಮಳೆ– ಗಾಳಿಗೆ ನೂರಾರು ಮರಗಳು ಬುಡಮೇಲಾಗಿವೆ. ಮರದಲ್ಲಿ ಹಬ್ಬಿಸಿದ ಕಾಳುಮೆಣಸಿನ ಬಳ್ಳಿಗಳೂ ನೆಲಕಚ್ಚಿವೆ.

‘ನಷ್ಟದ ಅಂದಾಜು ಮಾಡಿಲ್ಲ. ಸದ್ಯ, ಜಿಲ್ಲೆಯ ಕಾಫಿ, ಅಡಿಕೆ ಬೆಳೆಗಳಲ್ಲಿ ಶೇ 10ರಷ್ಟು ಕೊಳೆರೋಗ ವ್ಯಾಪಿಸಿದೆ. ಶೇ 5ರಿಂದ 10ರಷ್ಟು ಕಾಳುಮೆಣಸಿನ ಬಳ್ಳಿಗಳೂ ಬಾಧಿತವಾಗಿವೆ. ಮಳೆ ಹೀಗೆ ಮುಂದುವರಿದೆರೆ ಏಲಕ್ಕಿಗೂ ಬುಡಕೊಳೆರೋಗ ಬರುವ ಸಾಧ್ಯತೆ ಇದೆ’ ಎಂದು ಕೊಡಗಿನ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಮೋದ್ ಅವರು ತಿಳಿಸಿದರು.

ನಾಪೋಕ್ಲುವಿನ ಕಾಫಿ ಬೆಳೆಗಾರ ಎಸ್‌.ಉದಯಶಂಕರ, ‘ನಿರಂತರ ಮಳೆ, ಚಳಿ ಎರಡೂ ಸೇರಿ ಕಾಫಿಗಿಡಗಳಿಗೆ ಮಾರಕವಾಗಿದೆ. ಎಲೆ, ಕಾಫಿ ಕಾಯಿ ಉದುರುವುದು ಆರಂಭವಾಗಿದೆ. ಐದಾರು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದೆ’ ಎಂದರು.

ಅರ್ಧದಷ್ಟು ಫಸಲು ಕೈತಪ್ಪುವ ಭೀತಿ

ಹಾಸನ ಜಿಲ್ಲೆಯಲ್ಲಿ ಕಾಫಿ ಮತ್ತು ಮೆಣಸಿನಲ್ಲಿ ಶೇ 20ರಿಂದ ಶೇ 50 ರಷ್ಟು ಫಸಲು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಳೆಯುವ ಪ್ರದೇಶ

ಕಾಫಿ

ಚಿಕ್ಕಮಗಳೂರು: 90 ಸಾವಿರ ಹೆಕ್ಟೇರ್‌

ಕೊಡಗು: 1.07ಲಕ್ಷ ಹೆಕ್ಟೇರ್

ಹಾಸನ:41 ಸಾವಿರ ಹೆಕ್ಟೇರ್‌

ಕಾಳುಮೆಣಸು

ಚಿಕ್ಕಮಗಳೂರು: 55 ಸಾವಿರ ಹೆಕ್ಟೇರ್‌

ಕೊಡಗು: 16 ಸಾವಿರ ಹೆಕ್ಟೇರ್

ಹಾಸನ:8 ಸಾವಿರ ಹೆಕ್ಟೇರ್‌

ಏಲಕ್ಕಿ

ಚಿಕ್ಕಮಗಳೂರು: 500 ಹೆಕ್ಟೇರ್‌

ಕೊಡಗು: 8 ಸಾವಿರ ಹೆಕ್ಟೇರ್

ಹಾಸನ: 5 ಸಾವಿರ ಹೆಕ್ಟೇರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.