ಸಿದ್ದರಾಮಯ್ಯ
ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆಯಡಿ ನವೆಂಬರ್ 14ರಂದು ‘ಮಹಾ ಪಂಚಾಯತ್ ಸಮ್ಮೇಳನ’ ಆಯೋಜಿಸಲು ʻಗಾಂಧಿ ಭಾರತ ಶತಮಾನೋತ್ಸವʼ ಸಮಿತಿ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸಭೆ ಶನಿವಾರ ನಡೆಯಿತು. ಈ ಸಮ್ಮೇಳನಕ್ಕೆ ಗ್ರಾಮ ಪಂಚಾಯಿತಿಗಳ ಮಾಜಿ ಹಾಗೂ ಹಾಲಿ ಸದಸ್ಯರನ್ನು ಆಹ್ವಾನಿಸಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಲ್ಲದೆ, ಪಂಚಾಯತ್ ರಾಜ್ ಕಾಯ್ದೆ ಮತ್ತು ಗ್ರಾಮ ಸ್ವರಾಜ್ ಕುರಿತು ಡಿಸೆಂಬರ್ ತಿಂಗಳಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಗಾಂಧಿ ಭಾರತ ಶತಮಾನೋತ್ಸವ ಕಾರ್ಯಕ್ರಮಗಳಿಗೆ 2024ರ ಡಿ. 26ರಂದು ಚಾಲನೆ ನೀಡಲಾಗಿದ್ದು, 2025ರ ಡಿಸೆಂಬರ್ 26ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ರಾಜ್ಯದಾದ್ಯಂತ ನಿರಂತರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.
ರಾಜ್ಯದ 120 ಸ್ಥಳಗಳಲ್ಲಿ ಗಾಂಧೀಜಿ ಭೇಟಿ ನೀಡಿರುವ ನೆನಪಿಗಾಗಿ ಸ್ತಂಭಗಳನ್ನು ನವೆಂಬರ್ ಕೊನೆಯ ಒಳಗೆ ನಿರ್ಮಿಸಬೇಕು. ರಾಜ್ಯದಾದ್ಯಂತ ‘ಜ್ಯೋತಿ ಯಾತ್ರೆ’ಗಳನ್ನು ಆಯೋಜಿಸಬೇಕು. ಮಹಾತ್ಮಾ ಗಾಂಧೀಜಿಯವರ ಧ್ಯಾನಸ್ಥ ಭಂಗಿಯ ಭಾವಚಿತ್ರ ಹಾಗೂ ಅವರು ಹೇಳಿದ ಸಪ್ತ ಸಾಮಾಜಿಕ ಪಾತಕಗಳನ್ನು ಎಲ್ಲ ಶಾಲೆಗಳಲ್ಲಿ ಅಳವಡಿಸಬೇಕು ಎಂದೂ ಅವರು ಸೂಚನೆ ನೀಡಿದರು.
‘ಗಾಂಧಿ ವರ್ಸಸ್ ಗಾಂಧಿ’, ‘ಪಾಪು-ಬಾಪು’ ಹಾಗೂ ‘ಮಹಾತ್ಮರ ಬರುವಿಗಾಗಿ’ ಎಂಬ ಮೂರು ನಾಟಕಗಳನ್ನು ರಂಗಾಯಣದ ವತಿಯಿಂದ ನಿರ್ಮಿಸಿ ರಾಜ್ಯದಾದ್ಯಂತ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು, ಈಗಾಗಲೇ 16 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡಿದ್ದು, ನಿವೇಶನ ಸಿಗದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿ ಮುತುವರ್ಜಿ ವಹಿಸಿ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ನಿರ್ಮಾಣ ಪೂರ್ಣಗೊಳಿಸಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದೂ ಮುಖ್ಯಮಂತ್ರಿ ಸಲಹೆ ನೀಡಿದರು.
ಸಚಿವರಾದ ಎಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಶಾಸಕ ಆರ್.ವಿ. ದೇಶಪಾಂಡೆ, ಮುಖ್ಯಮಂತ್ರಿಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಶತಮಾನೋತ್ಸವ ಸಮಿತಿಯ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.