ADVERTISEMENT

ಮಹದಾಯಿ: ಮೇಲ್ಮನವಿ ಸಿದ್ಧ

ಬಿ.ಎಸ್.ಷಣ್ಮುಖಪ್ಪ
Published 9 ನವೆಂಬರ್ 2018, 20:38 IST
Last Updated 9 ನವೆಂಬರ್ 2018, 20:38 IST
   

ಬೆಂಗಳೂರು: ಮಹದಾಯಿ ನೀರು ಹಂಚಿಕೆ ಕುರಿತ ವ್ಯಾಜ್ಯದಲ್ಲಿ ‘ಮಹದಾಯಿ ನೀರು ವಿವಾದಗಳ ನ್ಯಾಯಮಂಡಳಿ’ ಐತೀರ್ಪು ಪ್ರಶ್ನಿಸಿ ಇದೇ 13ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ರಾಜ್ಯ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಈ ಕುರಿತಂತೆ ರಾಜ್ಯದ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಅವರ ನೇತೃತ್ವದಲ್ಲಿ, ರಾಜ್ಯದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ವಕೀಲರ ತಂಡ ಹಾಗೂ ತಾಂತ್ರಿಕ ತಜ್ಞರ ಜೊತೆ ಕಳೆದ 10 ದಿನಗಳಿಂದ ಎಡಬಿಡದೆ ಸಭೆ ನಡೆಸಲಾಗಿದೆ.

ಈ ಸಭೆಯಲ್ಲಿ ಭಾಗವಹಿಸಿದ್ದ ಅಡ್ವೊಕೇಟ್‌ ಜನರಲ್ ಉದಯ ಹೊಳ್ಳ, ಸುಪ್ರೀಂ ಕೋರ್ಟ್‌ ವಕೀಲರ ತಂಡದ ಬ್ರಿಜೇಶ್ ಕಾಳಪ್ಪ, ಶರದ್ ಜವಳಿ, ಎನ್‌.ಕೆ. ಪಾಟೀಲ, ಮುಖ್ಯ ಎಂಜಿನಿಯರ್‌ ಶ್ರೀರಾಮುಲು, ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜು, ಕೆ.ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ವೆಂಕಟಾಚಲ ಮತ್ತು ಬಿ.ಆರ್‌.ನಂದೀಶ್‌ ಅವರಿಂದ ಅಗತ್ಯ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ.

ADVERTISEMENT

ಈ ಕುರಿತಂತೆ ಶುಕ್ರವಾರ ‘ಪ್ರಜಾವಾಣಿ’ಗೆ ವಿವರಿಸಿದ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಅವರು, ‘ಕರ್ನಾಟಕವು ತನಗೆ ಅಗತ್ಯವಿರುವ ನೀರಿನ ಬೇಡಿಕೆಯ ಬಗ್ಗೆ ಮನದಟ್ಟು ಮಾಡಿಲ್ಲ ಎಂಬ ನ್ಯಾಯಮಂಡಳಿ ನಿರ್ಧಾರವನ್ನು ನಾವು ತಾರ್ಕಿಕ ಒರೆಗೆ ಹಚ್ಚಲು ಬಯಸಿದ್ದೇವೆ. ಸಮಾನ ಹಂಚಿಕೆ ಆಧಾರದಲ್ಲಿ ನಮಗೆ ಬರಬೇಕಾದ ನೀರು ಬಂದಿಲ್ಲ ಎಂಬ ಅಂಶವನ್ನು ನಮ್ಮ ವಕೀಲರು ಸುಪ್ರೀಂ ಕೋರ್ಟ್‌ಗೆ ಈ ಬಾರಿ ಸಮರ್ಥವಾಗಿ ಮನದಟ್ಟು ಮಾಡಿಕೊಡಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥವಾಗುವ ನೀರನ್ನು ಬಳಸಿಕೊಳ್ಳುವ ಬಗ್ಗೆ ಹಾಗೂ ಹೆಚ್ಚುವರಿ ಪ್ರವಾಹದ ನೀರನ್ನು ಬಳಸಿಕೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಲಾಗುವುದು’ ಎಂದೂ ತಿಳಿಸಿದರು.

‘ನ್ಯಾಯಮಂಡಳಿಗೆ ಸಲ್ಲಿಸಲಾಗುತ್ತಿರುವ ಸ್ಪಷ್ಟೀಕರಣ ಕೋರಿದ ಅರ್ಜಿ ಮತ್ತು ಮೇಲ್ಮನವಿಗಳು ಈಗ ಪೂರ್ಣ ಸಿದ್ಧಗೊಂಡಿವೆ. ಇದೇ 13ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಮತ್ತು 14ರಂದು ನ್ಯಾಯಮಂಡಳಿಗೆ ಸ್ಪಷ್ಟೀಕರಣದ ಅರ್ಜಿ ಸಲ್ಲಿಸಲಾಗುವುದು’ ಎಂದರು.

**

ಮಾತುಕತೆಗೆ ಈಗಲೂ ಅವಕಾಶವಿದೆ

‘ಮಹದಾಯಿ ವಿವಾದವನ್ನು ಈಗಲೂ ಕೋರ್ಟ್‌ನಿಂದ ಆಚೆಗೆ ರಾಜಿಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದೆ’ ಎಂಬುದು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರ ವಾದ ಮಂಡಿಸುವ ವಕೀಲರ ತಂಡದಲ್ಲಿ ಒಬ್ಬರಾದ ಬ್ರಿಜೇಶ್‌ ಕಾಳಪ್ಪ ಅವರ ಅನಿಸಿಕೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ’ಕರ್ನಾಟಕ, ಗೋವಾ ಮತ್ತು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಈ ಕುರಿತಂತೆ ಮಾತುಕತೆ ನಡೆಸಿ ಸರ್ವಸಮ್ಮತ ಸೂತ್ರ ಕಂಡು ಹಿಡಿದರೆ ವ್ಯಾಜ್ಯಕ್ಕೆ ತಗಲುವ ಸಮಯ, ಶ್ರಮ ಹಾಗೂ ಹಣ ವ್ಯಯವಾಗುವುದನ್ನು ತಪ್ಪಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.