ADVERTISEMENT

ಮಹದಾಯಿ ಯೋಜನೆ: ಅಧಿವೇಶನದಲ್ಲಿ ಗೋವಾ ನಡೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 15:51 IST
Last Updated 23 ಜುಲೈ 2025, 15:51 IST
<div class="paragraphs"><p>ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ &nbsp;(ಸಂಗ್ರಹ ಚಿತ್ರ)</p></div>

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಮಹದಾಯಿ ನದಿ  (ಸಂಗ್ರಹ ಚಿತ್ರ)

   

ಬೆಂಗಳೂರು: ಮಹದಾಯಿ ಯೋಜನೆ ಕುರಿತು ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ಕರ್ನಾಟಕ ಸರ್ಕಾರ ಖಂಡಿಸುತ್ತದೆ. ಈ ವಿಷಯ ಕುರಿತು ಆ.11ರಿಂದ ಆರಂಭವಾಗುವ ಅಧಿವೇಶನದಲ್ಲೂ ಚರ್ಚಿಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಉತ್ತರ ಕರ್ನಾಟಕದ ಜನರ ಹಾಗೂ ರೈತರ ಹಿತಾಸಕ್ತಿ ಗಮನಿಸಿ ಯೋಜನೆ ಅನುಷ್ಠಾನಕ್ಕೆ ತಕ್ಷಣ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‌ ಅವರು ತಮಗೆ ತಿಳಿಸಿದ್ದಾರೆಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಅಲ್ಲಿನ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಅವರ ಮಾತು ರಾಜ್ಯದ ಜನರಿಗೆ ಆಫಾತ ತಂದಿದೆ ಎಂದು ಹೇಳಿದರು.

ಮಹದಾಯಿ ಜಲವಿವಾದ ಕುರಿತು ಅಂತರರಾಜ್ಯ ಜಲವಿವಾದ ನ್ಯಾಯಮಂಡಳಿ ಅಂತಿಮ ತೀರ್ಪು ನೀಡಿ, ಆ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಐತೀರ್ಪು ಜಾರಿಗೆ ಬಂದಿದೆ. ಕರ್ನಾಟಕವು ಕಳಸಾ-ಬಂಡೂರಿ ಯೋಜನೆಗೆ 7.56 ಟಿಎಂಸಿ ಅಡಿ ನೀರನ್ನು ಮಲಪ್ರಭಾ ಕಣಿವೆಗೆ ತಿರುಗಿಸಿಕೊಳ್ಳಲು ತನ್ನ ಕೋರಿಕೆ ಸಲ್ಲಿಸಿತ್ತು. ಅದರಲ್ಲಿ 3.90 ಟಿಎಂಸಿ ಅಡಿ ನೀರನ್ನು ಕರ್ನಾಟಕದ ಪಾಲಿಗೆ ಹಂಚಿಕೆ ಮಾಡಿದೆ. ಅಂತರಕಣಿವೆ ತಿರುಗಿಸುವಿಕೆಯನ್ನು ಕರ್ನಾಟಕದ ಕಡೆಯಿಂದ ಮಾಡಿಕೊಳ್ಳಲು ನ್ಯಾಯಮಂಡಳಿ ಒಪ್ಪಿದೆ. ಹಾಗಿದ್ದರೂ ಗೋವಾ ತಕರಾರು, ಕೇಂದ್ರದ ಅನುಮತಿ ವಿಳಂಬ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಎಂದರು.

ಯೋಜನೆ ಜಾರಿಗೊಳಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕರ್ನಾಟಕ ಅರ್ಜಿ ಸಲ್ಲಿಸಿತ್ತು. 10.6 ಹೆಕ್ಟೇರ್‌ ಅರಣ್ಯ ಭೂಮಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಯೋಜನೆಗೆ ಕಾಯ್ದಿಟ್ಟ ಪ್ರದೇಶದಲ್ಲಿ ಬರುತ್ತದೆ ಎಂದು ಗೋವಾ ಆಕ್ಷೇಪಿಸಲು ಪ್ರಾರಂಭಿಸಿತು. ಜನವರಿ 2024ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಈ ಭೂಮಿಯ ಬಳಕೆಗೆ ಶಿಫಾರಸು ಮಾಡಿದೆ. ಇದಾದ ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಂದೆ 77ನೇ, 79ನೇ ಮತ್ತು 80ನೇ ಸಭೆಗಳಲ್ಲಿ ಈ ವಿಷಯವನ್ನು ನಿರ್ಣಯ ಮಾಡದೇ ವೃಥಾ ಕಾಲಹರಣ ಮುಂದೂಡುತ್ತಾ ಬಂದಿದ್ದಾರೆ ಎಂದು ದೂರಿದರು.

ಕೇಂದ್ರ ಜಲ ಆಯೋಗವು ಕಳಸಾ ಮತ್ತು ಬಂಡೋರಿ ಯೋಜನೆಗಳ ಪರಿಷ್ಕೃತ ವಿವರವಾದ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದೆ. ಸುಪ್ರೀಂ ಕೋರ್ಟ್‌ ಸಹ ಗೋವಾದ ಮೂಲದಾವೆಯ ಮೇಲಿನ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿದ್ದಲ್ಲದೇ, ಕಳಸಾ ಯೋಜನೆಗೆ ತಡೆ ಕೋರಿ ಕರ್ನಾಟಕದ ವಿರುದ್ಧ ತಡೆಯಾಜ್ಞೆ ನೀಡುವಂತೆ ಗೋವಾ ಮಾಡಿದ್ದ ಮನವಿಯನ್ನೂ ವಜಾ ಮಾಡಿದೆ. ಆದರೂ, ಕರ್ನಾಟಕದ ವಿರುದ್ಧ ಗೋವಾ ತಾರತಮ್ಯ ಧೋರಣೆ ಅನುಸರಿಸುತ್ತಾ, ಯೋಜನೆಗೆ ಅಡ್ಡಿಪಡಿಸುತ್ತಾ ಬಂದಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.