ಕಡತ
(ಸಾಂದರ್ಭಿಕ ಚಿತ್ರ)
ನವದೆಹಲಿ: ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವರದಿ ಸಲ್ಲಿಸುವ ಸಂಬಂಧ ನ್ಯಾಯಮಂಡಳಿಯ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಿಸಲಾಗಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ನೀರು ಹಂಚಿಕೆ ವಿವಾದಗಳನ್ನು ಪರಿಹರಿಸಲು ಈ ನ್ಯಾಯಮಂಡಳಿಯನ್ನು 2010ರಲ್ಲಿ ಸ್ಥಾಪಿಸಲಾಗಿತ್ತು. ನ್ಯಾಯಮಂಡಳಿಗೆ ಕರ್ನಾಟಕ ಹಾಗೂ ಗೋವಾ ಸರ್ಕಾರಗಳು ಸ್ಪಷ್ಟೀಕರಣ ಅರ್ಜಿ ಸಲ್ಲಿಸಿವೆ. ಹೀಗಾಗಿ, ಹೆಚ್ಚಿನ ವರದಿ ನೀಡಲು ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಜಲಶಕ್ತಿ ಸಚಿವಾಲಯವನ್ನು ನ್ಯಾಯಮಂಡಳಿ ಕೋರಿತ್ತು. ವರದಿ ನೀಡುವ ಅವಧಿಯನ್ನು ವಿಸ್ತರಿಸಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಮಹದಾಯಿ ವಿವಾದ ಬಗೆಹರಿಸಲು ಅಂತರ ರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಸೆಕ್ಷನ್ 4ರ ಅನ್ವಯ ನ್ಯಾಯಮಂಡಳಿ ರಚಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನ್ಯಾಯಮಂಡಳಿಯು 2018ರ ಆಗಸ್ಟ್‌ನಲ್ಲಿ ವರದಿ ಸಲ್ಲಿಸಿತ್ತು. ಈ ವರದಿಯ ಬಗ್ಗೆ 2020ರ ಫೆ.20ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಹೆಚ್ಚುವರಿ ವರದಿ ನೀಡಲು ನ್ಯಾಯಮಂಡಳಿಯ ಅವಧಿ ವಿಸ್ತರಿಸುತ್ತಿರುವುದು ಇದು ಆರನೇ ಬಾರಿ. ವರದಿ ನೀಡಲು ಇನ್ನೂ ಒಂದು ವರ್ಷ ಕಾಲಾವಕಾಶ ನೀಡಬೇಕು ಎಂದು ನ್ಯಾಯಮಂಡಳಿಯು ಜಲಶಕ್ತಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.