ADVERTISEMENT

ಶಾಸಕ ವೀರೇಂದ್ರ ವಿರುದ್ಧದ ಬೆಟ್ಟಿಂಗ್ ಪ್ರಕರಣ: ಅನಿಲ್‌ ಗೌಡ ದುಬೈ ಕಂಪನಿ ಪಾಲುದಾರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 0:30 IST
Last Updated 12 ಸೆಪ್ಟೆಂಬರ್ 2025, 0:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪ ಪ್ರಕರಣದಲ್ಲಿ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರ ಪ್ರಮುಖ ಪಾಲುದಾರ ಎಚ್‌.ಅನಿಲ್‌ ಗೌಡ ಅವರು ದುಬೈನಲ್ಲಿ ‘ಕ್ಯಾಸಲ್‌ ರಾಕ್‌ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್’ ಹೆಸರಿನಲ್ಲಿ ಬೆಟ್ಟಿಂಗ್‌ ಕಂಪನಿ ನಡೆಸುತ್ತಿದ್ದಾರೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಈ ಸಂಬಂಧದ ದಾಖಲೆಗಳನ್ನು ಹೈಕೋರ್ಟ್‌ಗೆ ಒದಗಿಸಿದೆ.

‘ಇ.ಡಿ ಅಧಿಕಾರಿಗಳು ನನಗೆ ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸಬೇಕು’ ಎಂದು ಕೋರಿ ವಕೀಲರೂ ಆದ ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಅವರ ಪುತ್ರ ಎಚ್‌.ಅನಿಲ್‌ ಗೌಡ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಇ.ಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌, ‘ಅರ್ಜಿದಾರರು ವಕೀಲರಾಗಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿಲ್ಲ ಎಂಬುದನ್ನು ‍ಪುನರುಚ್ಚರಿಸಿದರಲ್ಲದೆ, ಅನಿಲ್‌ ಗೌಡ ವೀರೇಂದ್ರ ಅವರ ಬೆಟ್ಟಿಂಗ್‌ ಅಕ್ರಮ ವ್ಯವಹಾರಗಳ ‍ಪ್ರಮುಖ ಪಾಲುದಾರಾಗಿದ್ದಾರೆ’ ಎಂದು ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ADVERTISEMENT

‘ಕ್ಯಾಸಲ್‌ ರಾಕ್‌ ಸಂಸ್ಥೆಯಲ್ಲಿ ವೀರೇಂದ್ರ ಅವರು ಶೇ 35ರಷ್ಟು ಮತ್ತು ಅನಿಲ್‌ ಗೌಡ ಶೇ 15ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅನಿಲ್‌ ಗೌಡ ಅವರಿಂದ ವಶಪಡಿಸಿಕೊಂಡಿರುವ ಲ್ಯಾಪ್‌ ಟಾಪ್‌ನಲ್ಲಿ ಶೇ 5ರಷ್ಟು ಲಾಭಾಂಶ ಅಂದರೆ ₹29 ಕೋಟಿ ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಅನಿಲ್‌ ಗೌಡ ಅವರು ವೀರೇಂದ್ರ ಜೊತೆ ಉದ್ಯಮ ನಡೆಸುತ್ತಿದ್ದರು ಎಂಬುದಕ್ಕೆ 2021ರ ಜುಲೈ 28ರ ಇ–ಮೇಲ್‌ ಸಾಕ್ಷಿ ಒದಗಿಸುತ್ತದೆ’ ಎಂದು ವಿವರಿಸಿದರು.

ಇ.ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅನಿಲ್‌ ಗೌಡ ಪರ ಹೈಕೋರ್ಟ್‌ ವಕೀಲ ರಜತ್‌ ಅವರು, ‘ಅರ್ಜಿದಾರರು ವೃತ್ತಿನಿರತ ವಕೀಲ ಎಂಬುದನ್ನು ತೋರಿಸಲು ಪೂರಕ ದಾಖಲೆ ಸಂಗ್ರಹಿಸಲಾಗುತ್ತಿದೆ. ಇವುಗಳನ್ನು ಸಲ್ಲಿಸಲು ಎರಡು ದಿನಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ಇದನ್ನು ಮನ್ನಿಸಿದ ನ್ಯಾಯಪೀಠ, ‘ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದು. ಅವುಗಳನ್ನು ಇ.ಡಿ ಪರ ವಕೀಲರಿಗೂ ಮುಂಚಿತವಾಗಿ ಒದಗಿಸಿ’ ಎಂದು ಸೂಚಿಸಿತು. ಅಂತೆಯೇ, ‘ಅನಿಲ್‌ ಗೌಡ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು’ ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ ವಿಚಾರಣೆ ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.