ADVERTISEMENT

ರತ್ನಗಿರಿಯಲ್ಲಿ ಬಾಹುಬಲಿಗೆ ಪಾದಾಭಿಷೇಕ

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 18:20 IST
Last Updated 10 ಫೆಬ್ರುವರಿ 2019, 18:20 IST
ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿ ಸ್ವಾಮಿ ಮೂರ್ತಿಗೆ ಭಾನುವಾರ 54 ಕಲಶಗಳಿಂದ ಪಾದಾಭಿಷೇಕ ನಡೆಯಿತು. ಪ್ರಜಾವಾಣಿ ಚಿತ್ರ
ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿ ಸ್ವಾಮಿ ಮೂರ್ತಿಗೆ ಭಾನುವಾರ 54 ಕಲಶಗಳಿಂದ ಪಾದಾಭಿಷೇಕ ನಡೆಯಿತು. ಪ್ರಜಾವಾಣಿ ಚಿತ್ರ   

ಉಜಿರೆ: ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ಭಾನುವಾರ ರತ್ನಗಿರಿಯಲ್ಲಿ ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕ್ಪಾಲಕ ಬಲಿ, ಯಜ್ಞ ಶಾಲೆಯಲ್ಲಿ ಯಕ್ಷಾರಾಧನೆ ಪೂರ್ವಕ ಯಕ್ಷ ಪ್ರತಿಷ್ಠೆ, ಅಭಿಜಿನ್ ಮುಹೂರ್ತದಲ್ಲಿ ಮಧ್ಯಾಹ್ನ 12.35ಕ್ಕೆ ಧ್ವಜಾರೋಹಣ ನಡೆಯಿತು.

ಬಳಿಕ ಜಲ, ಹಾಲು, ಗಂಧ, ಚಂದನ, ಅರಿಷಿಣ ಮೊದಲಾದ ಮಂಗಲದ್ರವ್ಯಗಳಿಂದ ಬಾಹುಬಲಿ ಸ್ವಾಮಿಗೆ 54 ಕಲಶಗಳಿಂದ ಪಾದಾಭಿಷೇಕ ನಡೆಯಿತು.
ಮಧ್ಯಾಹ್ನ ಮೂರರಿಂದ ಶ್ರೀ ಪೀಠ ಯಂತ್ರಾರಾಧನೆ, ಧ್ವಜಪೂಜೆ, ಶ್ರೀ ಬಲಿ ವಿಧಾನ ಮತ್ತು ಮಹಾ ಮಂಗಳಾರತಿ ನಡೆಯಿತು. ಸೋಮವಾರ 108 ಕಲಶಗಳಿಂದ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯಲಿದೆ.

ಬಾಹುಬಲಿ ಪಂಚಮಹಾವೈಭವ: ಅಮೃತವರ್ಷಿಣಿ ಸಭಾ ಭವನದ ಪಕ್ಕದಲ್ಲಿರುವ ಪಂಚಮಹಾವೈಭವ ಮಂಟಪದಲ್ಲಿ ಸೋಮವಾರ ಬೆಳಿಗ್ಗೆ 9.30ರಿಂದ ಆದಿನಾಥ ಮಹಾರಾಜರ ಆಡಳಿತದಲ್ಲಿ ನವಯುಗ ಆರಂಭ, ಪ್ರಜೆಗಳಿಗೆ ಅಸಿ, ಮಸಿ, ಕೃಷಿ ಬಗ್ಗೆ ಮಾರ್ಗದರ್ಶನದ ರೂಪಕ ಪ್ರದರ್ಶನ ನಡೆಯಲಿದೆ. ಸಂಜೆ 4ರಿಂದ ಆದಿನಾಥರ ಮಕ್ಕಳ ಬಾಲಲೀಲೋತ್ಸವ ನಡೆಯಲಿದೆ.

ADVERTISEMENT

ಐವರಿಗೆ ಕ್ಷುಲ್ಲಕ ದೀಕ್ಷೆ

ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ಜೀ ಮುನಿಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಹಾಗೂ ಮುನಿ ಸಂಘದವರು ಮತ್ತು ಮಾತಾಜಿಯವರ ನೇತೃತ್ವದಲ್ಲಿ ಐದು ಮಂದಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮಹೋತ್ಸವ ನಡೆಯಿತು. ಮಧ್ಯಪ್ರದೇಶದ 24 ವರ್ಷ ಪ್ರಾಯದ ಸತೀಶ್ ಬೈಯ್ಯಾಜಿ, ಹೈದರಾಬಾದ್‌ನ ಪೂರನ್ ಬೈಯ್ಯಾಜಿ, ಉತ್ತರ ಪ್ರದೇಶದ ಶ್ರೀ ಪ್ರಭು ಬೈಯ್ಯಾಜಿ, ಸಂಯಮ ಮತ್ತು ಸವಿತಾ ಕ್ಷುಲ್ಲಕ ದೀಕ್ಷೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.