ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ
ಚಿತ್ರಕೃಪೆ: ಎಕ್ಸ್
ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಮಾನವಿಕ ಮತ್ತು ಮುಕ್ತ ಕಲೆಗಳ ವಿಭಾಗದ ನಿರ್ದೇಶಕ ಟಿ.ಎಂ. ಮಂಜುನಾಥ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶ ಹೊರಡಿಸಿದ್ದಾರೆ.
ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಎಲ್. ಗೋಮತಿದೇವಿ ಅವರ ಅವಧಿ ನವೆಂಬರ್ 2024ಕ್ಕೆ ಮುಕ್ತಾಯವಾಗಿತ್ತು. ನಂತರ ಗೃಹ ವಿಜ್ಞಾನ ವಿಭಾಗದ (ಸ್ಕೂಲ್) ನಿರ್ದೇಶಕರಾಗಿದ್ದ ಸಿ. ಉಷಾದೇವಿ ಅವರನ್ನು ಪ್ರಭಾರ ಕುಲಪತಿಯಾಗಿ ನೇಮಕ ಮಾಡಲಾಗಿತ್ತು. ಉಷಾದೇವಿ ಅವರ ಅವಧಿ ಈ ವರ್ಷದ ಮಾರ್ಚ್‌ಗೆ ಮುಗಿದಿತ್ತು. ಆ ಸಮಯದಲ್ಲಿ ನಿಯಮದಂತೆ ಮಂಜುನಾಥ್ ಅವರನ್ನು ನೇಮಕ ಮಾಡದೇ ಪ್ರಾಧ್ಯಾಪಕಿ ಡಾ. ಮೀರಾ ಬಿ.ಕೆ. ಅವರನ್ನು ನೇಮಿಸಲಾಗಿತ್ತು.
ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಕಳುಹಿಸಿದ ಸೇವಾ ಹಿರಿತನದ ಪಟ್ಟಿ ತಿರಸ್ಕರಿಸಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ ಪ್ರಭಾರ ಕುಲಪತಿ ನೇಮಕ ಮಾಡಿದನ್ನು ಪ್ರಶ್ನಿಸಿ, ರಾಜ್ಯಪಾಲರಿಗೆ ಹಲವು ದೂರುಗಳು ಸಲ್ಲಿಕೆಯಾಗಿದ್ದವು.
ನಿಯಮಗಳು ಹಾಗೂ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ಕಾನೂನು ಅಭಿಪ್ರಾಯ ಪಡೆದು ಮಂಜುನಾಥ್ ಅವರಿಗೆ ಪ್ರಭಾರ ವಹಿಸಲಾಗಿದೆ ಎಂದು ರಾಜ್ಯಪಾಲರು ಆದೇಶದಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.