ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಬಿ.ಕೆ.ಮೀರಾ ಅವರ ನೇಮಕಾತಿ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನೇಮಕಾತಿಯನ್ನು ಪ್ರಶ್ನಿಸಿ, ಕುಲಪತಿ ಹುದ್ದೆ ಆಕಾಂಕ್ಷಿಯಾಗಿದ್ದ ಟಿ.ಎಂ.ಮಂಜುನಾಥ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕುಲಪತಿಯನ್ನು ನೇಮಕ ಮಾಡುವ ಅಧಿಕಾರ ಕುಲಾಧಿಪತಿಯಾದ ರಾಜ್ಯಪಾಲರಿಗೆ ಇದೆ. ಆದರೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ–2000ರ ಕಲಂ 16(2)ರ ಪ್ರಕಾರ, ಕುಲಪತಿ ಹುದ್ದೆಗೆ ಡೀನ್, ನಿರ್ದೇಶಕರನ್ನು ಹೊರತುಪಡಿಸಿದಂತೆ ಇತರರನ್ನು ನೇಮಕ ಮಾಡಲಾಗದು’ ಎಂದು ಆದೇಶಿಸಿದೆ.
‘ನನ್ನನ್ನೇ ಕುಲಪತಿಯನ್ನಾಗಿ ನೇಮಕ ಮಾಡಲು ನಿರ್ದೇಶಿಸಿ ಎಂದು ಅರ್ಜಿದಾರರು ಕೋರಿದ್ದಾರೆ. ಆದರೆ, ನ್ಯಾಯಾಲಯ ಈ ರೀತಿಯ ಅದೇಶವನ್ನು ಮಾಡಲಾಗದು. ಕಾನೂನು ಪ್ರಕಾರ ಅರ್ಜಿದಾರರನ್ನು ನೇಮಕ ಮಾಡುವ ಬಗ್ಗೆ ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕಾಯ್ದೆ–2000ರ ಕಲಂ 16(2) ಅನುಸಾರ ಪರಿಶೀಲನೆ ನಡೆಸಬಹುದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಿ.ಉಷಾದೇವಿ 2025ರ ಮಾರ್ಚ್ 31ರಂದು ನಿವೃತ್ತರಾಗಿದ್ದರು. ಈ ಹುದ್ದೆಗೆ ಪ್ರಭಾರ ಕುಲಪತಿಯನ್ನಾಗಿ ಬಿ.ಕೆ.ಮೀರಾ ಅವರನ್ನು ನೇಮಕ ಮಾಡಿ 2025ರ ಮಾರ್ಚ್ 28ರಂದು ಆದೇಶ ಹೊರಡಿಸಲಾಗಿತ್ತು.
‘ಸೇವಾ ಹಿರಿತನದಲ್ಲಿ ಹಿರಿಯ ನಿರ್ದೇಶಕನಾದ ನಾನೂ ಪ್ರಭಾರ ಕುಲಪತಿ ಹುದ್ದೆಗೆ ಅರ್ಹನಾಗಿದ್ದೆ. ಆದರೆ, ನನ್ನನ್ನು ಕಡೆಗಣಿಸಲಾಗಿದ್ದು, ನೇಮಕಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದು ಆಕ್ಷೇಪಿಸಿ, ವಿಶ್ವವಿದ್ಯಾಲಯದ, ‘ಸ್ಕೂಲ್ ಆಫ್ ಹ್ಯೂಮನಿಟೀಸ್ ಅಂಡ್ ಲಿಬರಲ್ ಆರ್ಟ್ಸ್’ ವಿಭಾಗದ ನಿರ್ದೇಶಕರೂ ಆದ ಅರ್ಜಿದಾರ ಟಿ.ಎಂ. ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಪ್ರತಿವಾದಿ ಮೀರಾ, ಪ್ರಾಣಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದು, ಹೆಣ್ಣುಮಕ್ಕಳ ಭೌತಿಕ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು. ಅಂತೆಯೇ, ಇದು ಮಹಿಳಾ ವಿಶ್ವವಿದ್ಯಾಲಯ ಆಗಿರುವುದರಿಂದ ಮಹಿಳೆಯನ್ನೇ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ’ ಎಂದು ರಾಜ್ಯಪಾಲರ ಕಚೇರಿಯು ಮೀರಾ ಅವರ ನೇಮಕಾತಿಯನ್ನು ಸಮರ್ಥನೆ ಮಾಡಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.