ADVERTISEMENT

ಮೀರಾಬಾಯಿ, ಸಿದ್ಧಗಂಗಾ ಮಠಕ್ಕೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 16:48 IST
Last Updated 29 ಸೆಪ್ಟೆಂಬರ್ 2021, 16:48 IST
   

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಮತ್ತು 2021ನೇ ಸಾಲಿನ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗಳನ್ನು ಪ್ರಕಟಿಸಿದೆ.

2020ನೇ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಮೀರಾಬಾಯಿ ಕೊಪ್ಪಿಕರ್ ಮತ್ತು 2021ನೇ ಸಾಲಿಗೆ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಸಿದ್ಧಗಂಗಾ ಮಠವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಆಧರಿಸಿ ಸಮಾಜದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರನ್ನು ಗುರುತಿಸಿ, ಗೌರವಿಸಲು ಈ ಪ್ರಶಸ್ತಿ ನೀಡಲಾಗುತ್ತಿದೆ. ಕೋವಿಡ್-19 ಕಾರಣಕ್ಕೆ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ. ಈ ಬಾರಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಂಗಾರೆಪ್ಪಾ ಹಿಂಚಿಗೇರಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು.
ಅ.2 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹5 ಲಕ್ಷ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಸಿದ್ಧಗಂಗಾ ಮಠ: ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದ ಶಿವಕುಮಾರ ಸ್ವಾಮೀಜಿ ಅವರ ಆಶಯದಂತೆ ಸತತವಾಗಿ 80 ವರ್ಷಗಳಿಂದ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ಕಾರ್ಯವನ್ನು ತುಮಕೂರಿನ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮತ್ತು ಸಿದ್ಧಗಂಗಾ ಮಠ ಕೈಗೊಂಡಿವೆ.

ಜಾತಿ-ಧರ್ಮ, ಪ್ರದೇಶದ ಭೇದವಿಲ್ಲದೆಯೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿರುವ ಮಠವು, ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆ ಎಂದು ಹೆಸರಾಗಿದೆ.

ಮೀರಾಬಾಯಿ ಕೊಪ್ಪಿಕರ

ಮೀರಾಬಾಯಿ ಕೊಪ್ಪಿಕರ (96) ಅವರು ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ ವಂಶದ ಕುಡಿ. ಸದ್ಯ ಮುಧೋಳದಲ್ಲಿರುವ ‘ವಾತ್ಸಲ್ಯ ಧಾಮ’ದಲ್ಲಿದ್ದಾರೆ. ಗಾಂಧಿವಾದಿಯಾಗಿರುವ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು. ಈಗ ವಯಸ್ಸಾಗಿದ್ದರಿಂದ ನೇಯ್ಗೆ ಮಾಡುತ್ತಿಲ್ಲ.

ಮೀರಾಬಾಯಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಾಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆ ಅವರ ಜತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ವಸ್ತುಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ ಆದಾಯದಿಂದ ಜೀವನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.