ADVERTISEMENT

ನಾನು ಗುರುಗೋವಿಂದ ಭಟ್ಟರ ಮರಿಮೊಮ್ಮಗ ಅಲ್ಲ ಎಂಬುದನ್ನು ನಿರೂಪಿಸಲಿ : ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 13:16 IST
Last Updated 2 ಜನವರಿ 2023, 13:16 IST
   

ಹಾವೇರಿ: ‘ನಾನು ಗುರುಗೋವಿಂದ ಭಟ್ಟರ ಮರಿ ಮೊಮ್ಮಗ ಎಂದು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹೇಳುತ್ತಿಲ್ಲ. ಅನೇಕ ವರ್ಷಗಳಿಂದ ಹೇಳಿಕೊಂಡು ಬಂದಿದ್ದೇನೆ. ನಾನು ಮರಿ ಮೊಮ್ಮಗ ಅಲ್ಲ ಎಂದು ಆರೋಪಿಸುತ್ತಿರುವವರು ಈಗ ಏಕೆ ಪ್ರಶ್ನೆ ಮಾಡುತ್ತಿದ್ದಾರೆ. ದಾಖಲೆಗಳಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿರುಗೇಟು ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಮಾಧ್ಯಮದವರು ಸೋಮವಾರ ಪ್ರಶ್ನಿಸಿದಾಗ, ‘ಪ್ರತಿ ವರ್ಷ ಗುರುಗೋವಿಂದ ಭಟ್ಟರ ಆರಾಧನೆಯನ್ನು ಕಳಸದಲ್ಲಿ ಮಾಡುತ್ತಿದ್ದೇವೆ. ನಾನು ಪ್ರತಿ ವರ್ಷ ಭಾಗವಹಿಸುತ್ತಿದ್ದೇನೆ. ಗುರುಗೋವಿಂದ ಭಟ್ಟರ ಸ್ಥಳ ನಮ್ಮದೇ ಆಗಿದೆ. ಗುರುಗೋವಿಂದ ಸೇವಾ ಸಮಿತಿಗೆ ನಾನು ಅನೇಕ ವರ್ಷ ಟ್ರಸ್ಟಿಯಾಗಿದ್ದೆ. ನಮ್ಮ ವಂಶದವರ ಬಗ್ಗೆ ನನಗಿಂತ ಬೇರೆಯವರಿಗೆ ಜಾಸ್ತಿ ಗೊತ್ತಿದೆಯಾ? ಎಂದು ಪ್ರಶ್ನಿಸಿದರು.

ಗುರು ಗೋವಿಂದ ಭಟ್ಟ ಜೋಶಿ ಎಂಬುದು ಪೂರ್ಣ ಹೆಸರು. ಇದು ಎಷ್ಟು ಜನರಿಗೆ ಗೊತ್ತಿದೆ. ಶಿಶುನಾಳ ಶರೀಫರ ಬಗ್ಗೆ ‘ಈಶ್ವರ ಅಲ್ಲಾ ನೀನೇ ಎಲ್ಲ’ ಶೀರ್ಷಿಕೆಯ ಧಾರಾವಾಹಿ ಹಿಂದೆ ಪ್ರಸಾರವಾಗುತ್ತಿತ್ತು. ಅದರಲ್ಲಿ ನಾಡೋಜ ಮಹೇಶ ಜೋಶಿ, ಗುರುಗೋವಿಂದ ಭಟ್ಟರ ವಂಶದವರು ಎಂದು ಬಿತ್ತರವಾಗುತ್ತಿತ್ತು. ಆಗ ಯಾಕೆ ಯಾರೂ ಪ್ರಶ್ನೆ ಮಾಡಲಿಲ್ಲ. ಈಗ ಕೆಲವರು ಕುತಂತ್ರ, ಕುಚೇಷ್ಟೆ ಹಾಗೂ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.