ADVERTISEMENT

ಮೆಕ್ಕೆಜೋಳ, ಹೆಸರುಕಾಳು ಬೆಲೆ ಕುಸಿತ: ಕ್ರಮಕ್ಕೆ ಆಗ್ರಹಿಸಿ ಪ್ರಧಾನಿಗೆ ಸಿಎಂ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 10:01 IST
Last Updated 22 ನವೆಂಬರ್ 2025, 10:01 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ಬೆಂಗಳೂರು: ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿಗಳನ್ನು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಪತ್ರದಲ್ಲಿ ಏನಿದೆ?

ಕರ್ನಾಟಕದಲ್ಲಿ ಮೆಕ್ಕೆ ಜೋಳ ಮತ್ತು ಹೆಸರುಕಾಳು ಬೆಳೆಯ ಬೆಲೆಗಳ ತೀವ್ರ ಕುಸಿತದ ಬಗ್ಗೆ ಗಾಢ ಆತಂಕ ಮತ್ತು ತುರ್ತು ಗಮನ ಹರಿಸುವ ಉದ್ದೇಶದಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ಇವು ಲಕ್ಷಾಂತರ ರೈತರ ಜೀವನಕ್ಕೆ ಆಧಾರವಾಗಿರುವ ಬೆಳೆಗಳಾಗಿವೆ. ಭಾರತ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ (MSP) ಗಣನೀಯವಾಗಿ ಕಡಿಮೆಯಾದ ಮಾರುಕಟ್ಟೆ ಬೆಲೆಗಳು ರೈತರಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿವೆ.

ಈ ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ 17.94 ಲಕ್ಷ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆ ಜೋಳ ಹಾಗೂ 4.16 ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಹೆಸರುಕಾಳು ಬೆಳೆಯಲಾಗಿದ್ದು, ರಾಜ್ಯದಲ್ಲಿ ಸುಮಾರು 54.74 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಮೆಕ್ಕೆ ಜೋಳ ಮತ್ತು 1.983 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಹೆಸರುಕಾಳು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಸಮೃದ್ಧಿಯ ಅವಕಾಶವಾಗಬೇಕಿತ್ತು, ಆದರೆ ಪ್ರಸ್ತುತ ಮಾರುಕಟ್ಟೆ ಸ್ಥಿತಿಯು ಇದನ್ನು ಸಂಕಷ್ಟವನ್ನಾಗಿ ಪರಿವರ್ತಿಸಿದೆ.

ಕೇಂದ್ರ ಸರ್ಕಾರ, ಮೆಕ್ಕೆ ಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ₹2,400 ಹಾಗೂ ಹೆಸರುಕಾಳಿಗೆ ₹8,768 ಕನಿಷ್ಟ ಬೆಂಬಲ ಬೆಲೆ ಘೋಷಿಸಿದ್ದರೂ, ಕರ್ನಾಟಕದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆ ಜೋಳಕ್ಕೆ ₹1600-1800 ಮತ್ತು ಹೆಸರುಕಾಳಿಗೆ ₹5,400 ಆಸುಪಾಸಿನಲ್ಲಿರುವುದು ತೀವ್ರ ಮತ್ತು ಹಿಂದೆಂದೂ ಕಾಣದ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಹಿಂದಿನ ಮೂರು ವರ್ಷಗಳ ಮಾದರಿ ಬೆಲೆಗಳು ಎಂಎಸ್‌ಪಿ ಗಿಂತ ಹೆಚ್ಚಿರುವಾಗ, ಈ ವರ್ಷ ಬಾಹ್ಯ ಒತ್ತಡಗಳ ಪರಿಣಾಮ ಮತ್ತು ಸರಬರಾಜು-ಬೇಡಿಕೆಗಳ ಅಸಮತೋಲನದಿಂದ ಬೆಲೆಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ.

ಕರ್ನಾಟಕದಲ್ಲಿ ಸುಮಾರು 32 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿದ್ದು, ಸ್ಥಳೀಯ ಕೈಗಾರಿಕೆಗಳ ಬಳಕೆಯ ಸಾಮರ್ಥ್ಯಕ್ಕಿಂತ ಇದು ಹೆಚ್ಚಾಗಿದೆ. ಆದ್ದರಿಂದ ಭಾರತ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ, ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಮುಖ ಬೇಡಿಕೆಗಳು
  • NAFED, FCI ಮತ್ತು NCCFಗೆ ತಕ್ಷಣ ಎಂಎಸ್‌ಪಿ ದರದಲ್ಲಿ ಖರೀದಿ ಆರಂಭಿಸಲು ನಿರ್ದೇಶನ ನೀಡಬೇಕು.

  • ಎಥೆನಾಲ್ ಪೂರೈಕೆಯ ಇಡಿ ವ್ಯವಸ್ಥೆಯಲ್ಲಿ ಕರ್ನಾಟಕದ ರೈತರ ನ್ಯಾಯಯುತ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿ.

  • ಕರ್ನಾಟಕಕ್ಕೆ ಎಥೆನಾಲ್‌ ಹಂಚಿಕೆ ಪ್ರಮಾಣವನ್ನು ಹೆಚ್ಚಿಸಿ.

  • ಮೆಕ್ಕೆಜೋಳ ಆಮದು ಕಡಿಮೆ ಮಾಡಿ.

  • ಹೆಸರುಕಾಳು ಖರೀದಿಗೆ ಗುಣಮಟ್ಟದ ನಿಯಮಗಳಲ್ಲಿ ಸಡಿಲಿಕೆ

ಕರ್ನಾಟಕದ ಪ್ರತಿಯೊಂದು ರೈತ ಕುಟುಂಬವು ಎಂಎಸ್‌ಪಿಯನ್ನು ಗೌರವಯುತ ಹಾಗೂ ನ್ಯಾಯಯುತ ಆದಾಯ ಎಂದು ಪರಿಗಣಿಸಿದೆ. ಇಂದು ಬೆಲೆಯು ಎಂಎಸ್‌ಪಿಗಿಂತ ಕೆಳಗೆ ಬಿದ್ದಾಗ ಮತ್ತು ಮಾರುಕಟ್ಟೆಗಳು ಅವರ ವಿರುದ್ಧ ನಿಂತಾಗ ತಕ್ಷಣ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ದೇಶದ ಆಹಾರ ಭದ್ರತೆಗೆ, ಎಥೆನಾಲ್‌ ಉತ್ಪಾದನೆಯ ಸಾಮರ್ಥ್ಯ ವಿಸ್ತರಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಕರ್ನಾಟಕದ ರೈತರು ಗರಿಷ್ಠ ಪ್ರಮಾಣದ ಕೊಡುಗೆಯನ್ನು ನೀಡುತ್ತಿದ್ದಾರೆ. ನ್ಯಾಯಯುತ ಬೆಲೆ ಮತ್ತು ಸಮಾನ ಎಥೆನಾಲ್‌ ಹಂಚಿಕೆಯು ರೈತರ ಹಕ್ಕು ಮಾತ್ರವಲ್ಲ, ಅದು ರಾಷ್ಟ್ರೀಯ ಜವಾಬ್ದಾರಿಯು ಹೌದು. ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ನೆರವಿಗೆ ತಕ್ಷಣ ಧಾವಿಸಬೇಕು ಮತ್ತು ನಮ್ಮ ರಾಷ್ಟ್ರದ ಬೆನ್ನೆಲುಬು ಆಗಿರುವ ಕೃಷಿ ಕ್ಷೇತ್ರವನ್ನು ಶಕ್ತಿಯುತವಾಗಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದೂ ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.