ಡಿ.ಕೆ. ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕರ್ನಾಟಕದಲ್ಲಿ ಜಾತಿ ಜನಗಣತಿ ವಿರೋಧಿಸಿ ಬರೆದ ಪತ್ರಕ್ಕೆ ಸಹಿ ಹಾಕಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ವರದಿ ಬಿಡುಗಡೆಗೆ ಶಿವಕುಮಾರ್ ವಿರೋಧಿಸುತ್ತಿದ್ದಾರೆ. ನೀವು (ಬಿಜೆಪಿ) ವಿರೋಧಿಸುತ್ತಿದ್ದೀರಿ. ಈ ವಿಷಯದಲ್ಲಿ ಪ್ರಬಲ ಜಾತಿಯ ಜನರು ಆಂತರಿಕವಾಗಿ ಒಗ್ಗಟ್ಟಾಗುತ್ತಾರೆ’ ಎಂದರು.
ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸುಶೀಲ್ ಕುಮಾರ್ ಮೋದಿ, ‘ಇತರ ಹಿಂದುಳಿದ ವರ್ಗಗಳ ಕುರಿತು ಕಾಂಗ್ರೆಸ್ ತೋರಿಸುತ್ತಿರುವ ಪ್ರೀತಿ ಒಂದು ನಾಟಕ’ ಎಂದು ವ್ಯಂಗ್ಯವಾಗಿ ಹೇಳಿದರು. ಉದಾಹರಣೆಯಾಗಿ, ಜಾತಿ ಗಣತಿ ವಿಷಯದಲ್ಲಿ ಶಿವಕುಮಾರ್ ತಳೆದ ನಿಲುವನ್ನು ಉಲ್ಲೇಖಿಸಿದರು. ‘ಜಾತಿ ಗಣತಿ ವರದಿಯನ್ನು ನಿಮ್ಮ ಸರ್ಕಾರ ಯಾವಾಗ ಬಹಿರಂಗಗೊಳಿಸುತ್ತದೆ ಎಂಬುದನ್ನು ಖರ್ಗೆಯವರೇ ಹೇಳಬೇಕು. ವರದಿ ಬಹಿರಂಗಗೊಳಿಸುವುದನ್ನು ವಿರೋಧಿಸಿ ಒಕ್ಕಲಿಗರ ಸಂಘ ಸಲ್ಲಿಸಿರುವ ಮನವಿಗೆ ಶಿವಕುಮಾರ್ ಸಹಿ ಹಾಕಿದ್ದಾರೆ’ ಎಂದೂ ಹೇಳಿದರು.
ಆಗ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಈ ವರದಿಯನ್ನು ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಶಾಸಕರು ಹಾಗೂ ವೀರಶೈವ ಮಹಾಸಭಾ ಸದಸ್ಯರು ವಿರೋಧಿಸಿದ್ದಾರೆ’ ಎಂದರು. ಆಗ ಎದ್ದು ನಿಂತು ಖರ್ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.